ನವದೆಹಲಿ: ಝಾಕೀರ್ ನಾಯ್ಕ್ ನೇತೃತ್ವದ ಇಸ್ಲಾಮಿಕ್ ರೀಸರ್ಚ್ ಫೌಂಡೇಷನ್ (ಐಆರ್ಎಫ್) ಮೇಲಿನ ನಿಷೇಧವನ್ನು ಮತ್ತೆ ಐದು ವರ್ಷಗಳ ಕಾಲ ಕೇಂದ್ರ ಸರಕಾರ ವಿಸ್ತರಿಸಿದೆ. ಪ್ರಸ್ತುತ ಮಲೇಷ್ಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಝಾಕೀರ್ ನಾಯ್ಕ್ ನೇತೃತ್ವದ ಐಆರ್ಎಫ್ ಸಂಸ್ಥೆಯನ್ನು ದೇಶದ ಭದ್ರತೆ ಹಾಗೂ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಆರೋಪದ ನೆಪವೊಡ್ಡಿ ಕೇಂದ್ರ ಸರಕಾರ ನಿಷೇಧಿಸಿತ್ತು.
ಐಆರ್ಎಫ್ ದೇಶದಲ್ಲಿನ ಜಾತ್ಯತೀತ ವ್ಯವಸ್ಥೆಗೆ ಅಡ್ಡಿಯಾಗ ಬಲ್ಲದು ಹಾಗೂ ದೇಶದ ಭದ್ರತೆ ಹಾಗೂ ಶಾಂತಿ, ಸೌಹಾರ್ದತೆಗೆ ಧಕ್ಕೆಗೆ ಆರೋಪ ಹೊರಿಸಿ ಕೇಂದ್ರ ಬಿಜೆಪಿ ಸರಕಾರವು ತನ್ನ ದ್ವೇಷ ರಾಜಕೀಯದ ಭಾಗವಾಗಿ 2017ರ ನವೆಂಬರ್ 17ರಂದು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ 1967ರ ಅಡಿಯಲ್ಲಿ ಮೊದಲ ಬಾರಿಗೆ ಐಆರ್ಎಫ್ ಸಂಸ್ಥೆಯನ್ನು ಕಾನೂನು ಬಾಹಿರ ಸಂಸ್ಥೆ ಎಂದು ಘೋಷಿಸಿತ್ತು.
ಝಾಕೀರ್ ನಾಯ್ಕ್ ಮತ್ತು ಅವರ ಸಂಸ್ಥೆ ಐಆರ್ಎಫ್ ದೇಶದಲ್ಲಿರುವ ವಿವಿಧ ಜಾತಿಗಳು, ಸಮುದಾಯಗಳು, ಗುಂಪುಗಳ ನಡುವೆ ಧರ್ಮದ ಹೆಸರಿನಲ್ಲಿ ದ್ವೇಷ, ಸೌಹಾರ್ದತೆಗೆ ಧಕ್ಕೆ ತರಲು ಪ್ರಚೋದನೆ ನೀಡುತ್ತಿದೆ ಎಂದು ಕೇಂದ್ರ ಸರಕಾರ ವಾದಿಸಿದೆ. ಅಲ್ಲದೇ ತಲೆಮರೆಸಿಕೊಂಡಿರುವ IRF ಸಂಸ್ಥೆಯ ಕಾರ್ಯಕರ್ತರು ಮತ್ತೆ ತಮ್ಮ ಕಾನೂನುಬಾಹಿರ ಚಟುವಟಿಕೆಗಳನ್ನು ಮುಂದುವರಿಸುವ ಸಾಧ್ಯತೆಯಿದ್ದು , ತಕ್ಷಣ ನಿಯಂತ್ರಿಸಬೇಕಿದೆ ಎಂದು ಹೇಳಿದೆ.
ಖ್ಯಾತ ಇಸ್ಲಾಮಿಕ್ ವಿಧ್ವಾಂಸರಾಗಿದ್ದ ಝಾಕೀರ್ ನಾಯ್ಕ್, ಇಸ್ಲಾಂ ಧರ್ಮ ಸ್ವೀಕರಿಸುವವರಿಗೆ ಧಾರ್ಮಿಕ ಪ್ರವಚನಗಳನ್ನು ನೀಡುವ ಮೂಲಕ ಎಲ್ಲೆಡೆ ಜನಮನ್ನನೆ ಗಳಿಸಿದ್ದರು. ಇದು ಕೇಂದ್ರ ಬಿಜೆಪಿ ಸರಕಾರದ ಕೆಂಗೆಣ್ಣಿಗೂ ಗುರಿಯಾಗಿತ್ತು.