ಬೆಂಗಳೂರು: ಬೆಂಗಳೂರಿನ ಹೋಟೆಲ್ ಒಂದರಲ್ಲಿ ನಡೆದಿರುವ ಬಾಂಬ್ ಸ್ಫೋಟ ಆಘಾತಕಾರಿ ಬೆಳವಣಿಗೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗುಪ್ತಚರ ಇಲಾಖೆಗಳ ವೈಫಲ್ಯ ಎದ್ದು ಕಾಣುತ್ತಿದೆ. ಇದಕ್ಕೆ ಕೆಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡೂ ಹೊಣೆ ಹೊರಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಈ ಪ್ರಕರಣದಡಿ ನಗರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಅದನ್ನು ಆದಷ್ಟು ಬೇಗ ಹೋಗಲಾಡಿಸಿ ಜನರಲ್ಲಿ ಸುರಕ್ಷತೆಯ ಭಾವನೆ ಮುಡಿಸಬೇಕಾದರೆ ಇದರಲ್ಲಿ ಭಾಗಿಯಾಗಿರುವವರನ್ನು ಆದಷ್ಟು ಬೇಗ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಯಾವುದೇ ಘಟನೆಗೂ ಮುಸ್ಲಿಮ್ ಸಮುದಾಯವನ್ನು ಎಳೆದು ತರುವ ಬಿಜೆಪಿಯ ದ್ವೇಷದ ರಾಜಕಾರಣ ಈ ಪ್ರಕರಣದಲ್ಲೂ ಮುಂದುವರಿದೆ. ವಿನಾಕಾರಣ ಮುಸ್ಲಿಂ ಸಮುದಾಯವನ್ನು ದೂಷಿಸುವ ಹೇಳಿಕೆಗಳನ್ನು ನೀಡಲಾಗುತ್ತಿದೆ. ಇಂತಹ ದ್ವೇಷದ ಹೇಳಿಕೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.