ಬೆಂಗಳೂರು,ಏ.2- ನಾಯಂಡಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಅದೃಷ್ಟವಶಾತ್ ಮಗು ಹಾಗೂ ಅಜ್ಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಮೆಂಟ್ ತುಂಬಿದ್ದ ಲಾರಿ ಸ್ಕೂಟರ್ ಮೇಲೆ ಹರಿದು ಬಳಿಕ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದೆ. ಪರಿಣಾಮ ಸ್ಕೂಟಿ ಚಲಾಯಿಸುತ್ತಿದ್ದ ಅನುಷಾ ತಲೆ ಛಿದ್ರವಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅಪಘಾತದಲ್ಲಿ ಮೃತ ಅನುಷಾ ತಾಯಿ ವೃದ್ಧೆ ವನಜಾಕ್ಷಿ ಹಾಗೂ ಮಗ ಆರ್ಯಗೆ ಗಂಭೀರ ಗಾಯಗಳಾಗಿವೆ.
ಮಂಡ್ಯ ಮೂಲದ ಅನುಷಾ ಸಾವಿಗೀಡಾದ ಮಹಿಳೆಯಾಗಿದ್ದು, ಈಕೆ ತನ್ನ ತಾಯಿ ಮತ್ತು 7 ವರ್ಷದ ಮಗುವನ್ನು ದ್ವಿಚಕ್ರವಾಹನದಲ್ಲಿ ಕೂರಿಸಿಕೊಂಡು ದೀಪಾಂಜಲಿನಗರ ಕಡೆಯಿಂದ ಬರುತ್ತಿದ್ದರು.
ಈ ಸಂದರ್ಭದಲ್ಲಿ ಸಿಮೆಂಟ್ ತುಂಬಿಸಿಕೊಂಡು ಬರುತ್ತಿದ್ದ ಲಾರಿಯೊಂದು ಬೈಕ್ ಮೇಲೆ ಹರಿದು ಬಳಿಕ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಲಾರಿ ಅನುಷಾ ತಲೆ ಮೇಲೆ ಹರಿದಿದೆ.
ಇನ್ನು ಅಜ್ಜಿ ವನಜಾಕ್ಷಿಯ ಎರಡು ಕಾಲುಗಳ ಕಟ್ ಆಗಿದ್ದು, ಮಗುವಿಗೂ ಸಹ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಇದನ್ನು ನೋಡಿದ ಸ್ಥಳೀಯರು ತೀವ್ರ ಆಕ್ರೋಶಗೊಂಡಿದ್ದು, ಲಾರಿ ಚಾಲಕನ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಪ್ರತಿಭಟನೆ ನಡೆಸಿದರು. ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದಿದ್ದರಿಂದ ಲಾರಿ ನಿಂತಿದೆ. ಇಲ್ಲದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು ಎನ್ನಲಾಗಿದೆ.ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಲಾರಿಗೆ ಕಲ್ಲು ತೂರಿದ್ದು, ಮುಂಭಾಗದ ಗಾಜುಗಳು ಒಡೆದುಹೋಗಿವೆ.
ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರ ಪೊಲೀಸರು ಆಗಮಿಸಿ ಪ್ರತಿಭಟನೆಕಾರರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು. ಇನ್ನು ಘಟನೆ ಸಂಭವಿಸುತ್ತಿದ್ದಂತೆಯೇ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾರ್ವಜನಿಕರು ಚಾಲಕನ್ನು ಹಿಡಿಯಲು ಪ್ರಯತ್ನಿಸಿದರಾದರೂ ಸಾಧ್ಯವಾಗಿಲ್ಲ.