ಬೆಂಗಳೂರು: ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ನಿಧನಕ್ಕೆ ನಾಡಿನ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, ತಾನು ನಂಬಿದ ಮೌಲ್ಯಗಳಿಗೆ ಬದ್ಧರಾಗಿ, ಎದುರಾದ ವಿರೋಧಗಳನ್ನು ದಿಟ್ಟತನದಿಂದ ಎದುರಿಸಿ, ಮುಸ್ಲಿಂ ಲೋಕದ ತವಕ-ತಲ್ಲಣಗಳಿಗೆ ದನಿಯಾಗಿದ್ದ ಹಿರಿಯ ಸಾಹಿತಿ ಸಾ ರಾ ಅಬೂಬಕರ್ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ.
ಅವರ ಬಂಧುಗಳು ಮತ್ತು ಓದುಗ ಬಳಗದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಟ್ವೀಟ್ ಮಾಡಿ, ಕರಾವಳಿ ಸೌಹಾರ್ದತೆಯ ಗಟ್ಟಿ ಧ್ವನಿ, ಕೋಮುವಾದದ ವಿರುದ್ಧದ ದಿಟ್ಟ ದನಿ ಅಸ್ತಂಗತವಾಗಿದೆ. ಲೇಖಕಿ ಸಾರಾ ಅಬೂಬಕ್ಕರ್ ನಿಧನ ಸಾಹಿತ್ಯ ಲೋಕಕ್ಕೆ ತುಂಬಿ ಬಾರದ ನಷ್ಟ. ದುರಿತ ಕಾಲದಲ್ಲಿ ಸಾರಾ ಅವರ ಅಗಲಿಕೆ ಕುಟುಂಬದ ಸದಸ್ಯರನ್ನೇ ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಕುಟುಂಬಸ್ಥರು ಹಾಗೂ ಅವರ ಒಡನಾಡಿಗಳ ನೋವಲ್ಲಿ ನಾನು ಭಾಗಿ ಎಂದು ಸಂತಾಪ ಸೂಚಿಸಿದ್ದಾರೆ.
ಸಾರಾ ಅಬೂಬಕ್ಕರ್ ಅವರ ನಿಧನಕ್ಕೆ ಸಂತಾಪ
ಹಿರಿಯ ಲೇಖಕಿ, ಕಾದಂಬರಿಗಾರ್ತಿ ಸಾರಾ ಅಬೂಬಕ್ಕರ್ ಅವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕರಾವಳಿ ಕರ್ನಾಟಕ ಪ್ರಸಿದ್ಧ ಲೇಖಕಿ ಕಾದಂಬರಿಗಾರ್ತಿ ಕಥೆಗಾರ್ತಿ ಸರ್ವಧರ್ಮಸಮನ್ವಯದ ಸಾಹಿತಿ ನೇರ ನಡೆ-ನುಡಿಯ ನಿರ್ಭಿಡೆಯ ಬರಹಗಾರ್ತಿಯಾಗಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತ ಗೊಳಸಿದವರು. ಪ್ರಚಾರ ಬಯಸದೆ ಕನ್ನಡ ಸಾಹಿತ್ಯ ಲೋಕದಲ್ಲಿ ಬರಹಗಳ ಮೂಲಕ ಕಥೆಗಳ ಮೂಲಕ ಪ್ರಸಿದ್ಧಿಯನ್ನು ಪಡೆದವರು. ಅವರ ಅಗಲುವಿಕೆ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಮತ್ತು ಕುಟುಂಬ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ