ಪಾಕಿಸ್ತಾನದ ಕ್ರಿಕೆಟ್ ಗೆಲುವನ್ನು ಆಚರಿಸುವುದು ದೇಶದ್ರೋಹವಲ್ಲ: ಸುಪ್ರೀಂ ಕೋರ್ಟ್ ನ್ಯಾ. ದೀಪಕ್ ಗುಪ್ತ

Prasthutha|

ನವದೆಹಲಿ : ಕ್ರಿಕೆಟ್ ನಲ್ಲಿ ಪಾಕಿಸ್ತಾನದ ಗೆಲುವನ್ನು ಸಂಭ್ರಮಾಚರಿಸಿದರೆ ಅದು ಖಂಡಿತವಾಗಿಯೂ ದೇಶದ್ರೋಹ ಅಲ್ಲ ಎಂದು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ದೀಪಕ್ ಗುಪ್ತ ಅಭಿಪ್ರಾಯ ಪಟ್ಟಿದ್ದಾರೆ.

- Advertisement -


ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಜಸ್ಟಿಸ್ ಗುಪ್ತ ಅವರು “ಇದು ಸುಮ್ಮನೆ ಹಣ ಮತ್ತು ಸಮಯ ಹಾಳು ಮಾಡುವ ಪ್ರಕ್ರಿಯೆ. ಪಾಕಿಸ್ತಾನದ ಗೆಲುವನ್ನು ಯಾರಾದರೂ ಸಂಭ್ರಮಿಸಿದರೆ ಅದನ್ನು ದೇಶದ್ರೋಹ ಎಂದು ಆರೋಪ ಮಾಡಿದರೆ ದೇಶದ ಕಾನೂನುಗಳಡಿ ಯಾವ ಕೋರ್ಟಿನಲ್ಲೂ ಆ ಮೊಕದ್ದಮೆ ನಿಲ್ಲುವುದಿಲ್ಲ” ಎಂದು ಅವರು ಹೇಳಿದರು.ಕೆಲವರಿಗೆ ಇಂಥ ವಿಚಾರಗಳು ಆಕ್ರಮಣಕಾರಿ ವಿಚಾರ ಎನಿಸಬಹುದು. ಆದರೆ ಅದು ಅಪರಾಧವಲ್ಲ ಎಂದು ಅವರು ಹೇಳಿದರು.


ಎಲ್ಲ ಕಾನೂನುಬದ್ಧ ನಡೆಗಳು ಒಳ್ಳೆಯ ಮತ್ತು ನೈತಿಕತೆಯ ನಡಾವಳಿಯೇ ಆಗಿರಬೇಕೆಂದೇನೂ ಇಲ್ಲ. ಅದೇ ರೀತಿ ಎಲ್ಲ ಕೆಟ್ಟ ಮತ್ತು ಅನೈತಿಕ ಚಟುವಟಿಕೆಗಳು ಕಾನೂನುಬಾಹಿರ ಆಗಿರಬೇಕೆಂದೇನೂ ಇಲ್ಲ. ಭಾರತದಲ್ಲಿ ನಾವು ಕಾನೂನಿನ ಆಡಳಿತದಲ್ಲಿದ್ದೇವೆ, ನೈತಿಕತೆಯ ಆಡಳಿತದಲ್ಲಿ ಅಲ್ಲ. ವಿಭಿನ್ನ ಧರ್ಮಗಳು, ವಿಭಿನ್ನ ಕಾಲದಲ್ಲಿ ಈ ಸಮಾಜದಲ್ಲಿ ವಿಭಿನ್ನ ನೈತಿಕತೆಗೆ ಒಳಪಡುತ್ತಿರುತ್ತಾರೆ ಎಂದೂ ಜಸ್ಟಿಸ್ ಗುಪ್ತ ಹೇಳಿದರು.

- Advertisement -


ಈ ವೇಳೆ ಜಸ್ಟಿಸ್ ಗುಪ್ತ ಅವರು ಬಲವಂತ್ ಸಿಂಗ್ ವರ್ಸಸ್ ಪಂಜಾಬ್ ಸರಕಾರದ ನಡುವಿನ ಮೊಕದ್ದಮೆಯನ್ನು ಉದಾಹರಣೆಯಾಗಿ ಹೇಳಿದರು. ಖಲಿಸ್ತಾನ್ ಜಿಂದಾಬಾದ್ ಎಂದು ಹೇಳುವುದು ದೇಶದ್ರೋಹ ಆಗುವುದಿಲ್ಲ. ಅದು ಗಲಭೆಯಂಥ ಪ್ರಕರಣವೂ ಎಲ್ಲ ಎಂದು ತೀರ್ಪು ಬಂದುದನ್ನು ನೆನಪು ಮಾಡಿದರು.


ಆಗ್ರಾದಲ್ಲಿರುವ ಕಾಶ್ಮೀರದ ವಿದ್ಯಾರ್ಥಿಯೊಬ್ಬನು ಪಾಕಿಸ್ತಾನದ ಕ್ರಿಕೆಟ್ ಗೆಲುವನ್ನು ಸಂಭ್ರಮಿಸಿದ್ದರ ವಿರುದ್ಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಟ್ವೀಟ್ ಮಾಡಿ ಆತನ ಮೇಲೆ ದೇಶದ್ರೋಹದ ಆಪಾದನೆ ಹೊರಿಸುವುದಾಗಿ ಹೇಳಿದ್ದನ್ನು ಈ ದೇಶದ ಯಾವುದೇ ಕಾನೂನು ಬೆಂಬಲಿಸುವುದಿಲ್ಲ ಎಂದು ಗುಪ್ತ ತಿಳಿಸಿದರು.


ಒಬ್ಬನ ವಿರುದ್ಧ ದೇಶದ್ರೋಹದ ಮೊಕದ್ದಮೆ ಹೂಡುವ ಬಗ್ಗೆ ಮುಖ್ಯಮಂತ್ರಿ ಒಬ್ಬರು ಟ್ವೀಟ್ ಮಾಡುವುದೇ ಕಾನೂನು ಬಾಹಿರ. ಅಂಥ ಮೊಕದ್ದಮೆಯ ವಿಧಿ ವಿಧಾನಗಳು ಬೇರೆಯೇ ನಡೆಯಬೇಕು.
ಆಟದಲ್ಲಿ ಗೆದ್ದುದನ್ನು ರಾಜಕೀಯಕ್ಕೆ ಎಳೆಯುವುದು ಮೂರ್ಖತನ. ಆಸ್ಟ್ರೇಲಿಯಾ, ಬ್ರಿಟನ್, ಅಮೆರಿಕ ಮೊದಲಾದೆಡೆ ಇರುವ ಭಾರತೀಯರು ಆ ದೇಶಗಳವರ ಮೇಲೆ ಭಾರತೀಯರು ಗೆದ್ದಾಗ ಅದನ್ನು ಸಂಭ್ರಮಿಸಿದ್ದಾರೆ, ಆಚರಿಸಿದ್ದಾರೆ. ಆ ದೇಶಗಳೆಲ್ಲ ಆಗ ಅಲ್ಲಿ ದೇಶದ್ರೋಹದ ಮೊಕದ್ದಮೆ ಹೂಡಿದವೆ? ಆಟದ ಆನಂದವನ್ನು ಅಪರಾಧ ಎನ್ನುವ ಕಾನೂನು ಯಾವುದೂ ಇಲ್ಲ ಎಂದು ಹೇಳಿದರು.
ರಾಜಕಾರಣಿಗಳು, ಪೊಲೀಸರು, ನ್ಯಾಯಾಂಗದ ಕೆಲವರು ದೇಶದ್ರೋಹದ ಮೊಕದ್ದಮೆಯನ್ನು ದುರುಪಯೋಗ ಮಾಡುತ್ತಿದ್ದಾರೆ. ಅದು ತಿರುಚುವಿಕೆ ಅಷ್ಟೆ. ಸುಪ್ರೀಂ ಕೋರ್ಟ್ ಇಂಥ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಿ ದೇಶದ್ರೋಹದ ಮೊಕದ್ದಮೆಯು ಸಂವಿಧಾನ ಬದ್ಧವೆ, ಸಂವಿಧಾನ ಬದ್ಧವಾದರೆ ಅದರ ಮಿತಿಗಳೇನು, ವ್ಯಾಪ್ತಿಗಳೇನು ಎಂಬುದನ್ನು ವಿವರಿಸಬೇಕು. ರಾಜಕಾರಣಿಗಳು, ಪೊಲೀಸರು ಅಕಾರಣವಾಗಿ ದೇಶದ್ರೋಹದ ಮೊಕದ್ದಮೆಯನ್ನು ದುರುಪಯೋಗಿಸುವುದಕ್ಕೆ ಅವಕಾಶ ನೀಡಬಾರದು ಎಂದು ನಿವೃತ್ತ ನ್ಯಾಯಾಧೀಶರು ತಿಳಿಸಿದರು.


ಯುಎಪಿಎ ಸಹವರ್ತಿಯಾಗಿ ದೇಶದ್ರೋಹದ ಕಾನೂನನ್ನು ಇಂದು ಬಿಜೆಪಿ ಸರಕಾರಗಳು ಬಳಸುತ್ತಿರುವುದರಿಂದ ಇದನ್ನು ಮೂಲದಿಂದಲೇ ಸಂವಿಧಾನ ಬದ್ಧ ಎಂದು ಹೇಳುವುದು ಸಾಧ್ಯವಿಲ್ಲ ಎಂಬುದು ಸಹ ಈ ಸಂಬಂಧವಾಗಿ ತಜ್ಞರ ಅಭಿಮತವಾಗಿದೆ.
ಆಗ್ರಾದ ವಿದ್ಯಾರ್ಥಿ ಮೇಲೆ ಸೈಬರ್ ಉಗ್ರವಾದ 66ಎಫ್, ಧಾರ್ಮಿಕ ತಳಹದಿಯ ಮೇಲೆ ದ್ವೇಷ ಹೆಚ್ಚಿಸುವಿಕೆ 153ಎ, ಸಾರ್ವಜನಿಕ ಶಾಂತಿಭಂಗ 505(1)ಬಿ ವಿಧಿಗಳಡಿ ಮೊಕದ್ದಮೆ ಹೂಡಲಾಗಿದೆ. ಅದು ದೇಶದ್ರೋಹ ಎನಿಸುವುದಿಲ್ಲ ಎಂದು ಕೆಲವು ತಜ್ಞರು ವಿವರಿಸಿದ್ದಾರೆ. 153ಎ ಹಿಂದುತ್ವದ ವಿರುದ್ಧ ಎಂದು ಎಲ್ಲೂ ಹೇಳುವುದಿಲ್ಲ ಎಂದೂ ಗುಪ್ತ ಹೇಳಿದರು.
ಕ್ರಿಕೆಟ್ ಗೆಲುವಿನ ಬಗೆಗೆ ಸಂಭ್ರಮ ಎಂಬುದು ಹೇಗೆ ಸಾರ್ವಜನಿಕ ಶಾಂತಿ ಭಂಗದ ಉದ್ದೇಶ ಆಗುತ್ತದೆ, 505(1)ಬಿ ಕೂಡ ಅನಗತ್ಯ. ಭಾರತ ಪಾಕಿಸ್ತಾನ ಕ್ರಿಕೆಟ್ ಸೋಲು ಗೆಲುವನ್ನು ಒಂದು ಅಪರಾಧ ಪ್ರಕ್ರಿಯೆಯಡಿ ಗಮನಿಸಬೇಕು ಎಂಬುದನ್ನು ನಾನು ಒಪ್ಪುವುದೇ ಇಲ್ಲ ಎಂದು ಸಹ ಜಸ್ಟಿಸ್ ಗುಪ್ತ ಹೇಳಿದರು.



Join Whatsapp