ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ ಒಡ್ಡಿದ್ದ ಕಿಡಿಗೇಡಿ IIT ಪದವೀಧರ..!

Prasthutha|

ಪಾಕಿಸ್ತಾನದ ಧ್ವಜ ಹಾಕುವ ಮೂಲಕ ಜಾಲತಾಣಗಳಲ್ಲಿ ಚರ್ಚೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದ ಆರೋಪಿ

- Advertisement -

ಮುಂಬೈ: ದೇಶಾದ್ಯಂತ ವ್ಯಾಪಕ ಚರ್ಚೆಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿಯ 9 ತಿಂಗಳ ಪುತ್ರಿಗೆ ಅತ್ಯಾಚಾರ ಬೆದರಿಕೆ ಪ್ರಕರಣದ ಆರೋಪಿ ರಾಮ್’ಗಣೇಶ್ ಶ್ರೀನಿವಾಸ್ (23) ನನ್ನು ಬುಧವಾರ ಮುಂಬೈ ಸೈಬರ್ ಸೆಲ್ ಪೊಲೀಸರು ಹೈದರಾಬಾದ್’ನಲ್ಲಿ ಬಂಧಿಸಿದ್ದರು.

ಪೊಲೀಸ್ ವಿಚಾರಣೆಯ ವೇಳೆ ಈತನ ಕುರಿತ ಹೆಚ್ಚಿನ ಮಾಹಿತಿ ಲಭ್ಯವಾಗಿದ್ದು, ರಾಮ್’ಗಣೇಶ್ ಶ್ರೀನಿವಾಸ್ , ಎರಡು ವರ್ಷಗಳ ಹಿಂದೆ ಹೈದರಾಬಾದ್’ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ –IIT ಯಲ್ಲಿ ಪದವಿ ಶಿಕ್ಷಣ ಪೂರೈಸಿದ್ದ. ಬಳಿಕ ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಪ್ರಮುಖ ಫುಡ್ ಡೆಲಿವರಿ ಆ್ಯಪ್’ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ್ದ. ವರ್ಷಕ್ಕೆ 24 ಲಕ್ಷ ರೂಪಾಯಿಗಳ ಪ್ಯಾಕೇಜ್ ಪಡೆಯುತ್ತಿದ್ದ ರಾಮ್’ಗಣೇಶ್ ಶ್ರೀನಿವಾಸ್, ಅಮೆರಿಕಾದಲ್ಲಿ ಉನ್ನತ ಶಿಕ್ಷಣ ಪಡೆಯುವ ಉದ್ದೇಶದಿಂದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಇತ್ತೀಚೆಗೆ ಊರಿಗೆ ಮರಳಿದ್ದ ಎಂಬ ವಿಚಾರವು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ.

- Advertisement -

ಈ ಕುರಿತು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ರಾಮ್’ಗಣೇಶ್ ಶ್ರೀನಿವಾಸ್ ತಂದೆ, ನನ್ನ ಮಗ ಯಾಕೆ ಈ ರೀತಿಯಾಗಿ ವರ್ತಿಸಿದ್ದಾನೆ ಎಂಬುದು ಈಗಲೂ ಅರ್ಥವಾಗುತ್ತಿಲ್ಲ. ಪೊಲೀಸರು ನಮ್ಮ ಮನೆಗೆ ಬಂದ ಬಳಿಕವಷ್ಟೇ ಘಟನೆ ನಮ್ಮ ಅರಿವಿಗೆ ಬಂದಿದೆ ಎಂದು ಹೇಳಿದ್ದಾರೆ.

ಅಮೆನಾ ಹೆಸರಿನ ಟ್ವಟರ್ ಖಾತೆಯಿಂದ ಕೊಹ್ಲಿಯ 9 ತಿಂಗಳ ಪುತ್ರಿಗೆ ಅತ್ಯಾಚಾರ ಬೆದರಿಕೆ ಹಾಕಿದ ವಿಚಾರದಲ್ಲಿ ಅಕ್ಟೋಬರ್ 24ರಂದು ಮುಂಬೈ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದರು. ಟ್ವೀಟ್ ವಿಚಾರವು ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ರಾಮ್’ಗಣೇಶ್ ಶ್ರೀನಿವಾಸ್, ವಮಿಕಾ ಹೆಸರಿನ ಅಕೌಂಟ್ ಡಿಲೀಟ್ ಮಾಡಿದ್ದ. ಆದರೂ ನವೆಂಬರ್ 10ರಂದು ಆರೋಪಿ ತೆಲಂಗಾಣದ ಸಂಗರ್’ರೆಡ್ಡಿ ನಿವಾಸಿ ಸಾಫ್ಟ್’ವೇರ್ ಇಂಜಿನಿಯರ್ ಆಗಿರುವ ರಾಮ್’ಗಣೇಶ್ ಶ್ರೀನಿವಾಸ್’ನನ್ನು ಮಂಬೈನ ವಿಶೇಷ ಪೊಲೀಸ್ ತಂಡ ಬಂಧಿಸಿದೆ.

ಅಮೆನಾ ಎಂಬ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದ ರಾಮ್’ಗಣೇಶ್ ಶ್ರೀನಿವಾಸ್, ಹೆಸರಿನ ಎದುರು ಪಾಕಿಸ್ತಾನದ ಧ್ವಜವನ್ನು ಹಾಕುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದ. ಇದನ್ನೇ ನಂಬಿದ ಕೆಲವರು ಪಾಕಿಸ್ತಾನದಿಂದಲೇ ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ ಬಂದಿದೆ ಎಂಬ ರೀತಿಯಲ್ಲಿ ಚರ್ಚೆಯನ್ನು ಮಾಡಿದ್ದರು. ಧರ್ಮಾಂಧರ ಟೀಕೆಗೆ ಗುರಿಯಾಗಿದ್ದ ತನ್ನ ಸಹ ಆಟಗಾರ ಮುಹಮ್ಮದ್ ಶಮಿಯನ್ನು ಬೆಂಬಲಿಸಿದ ಕಾರಣಕ್ಕಾಗಿ ವಿರಾಟ್ ಕೊಹ್ಲಿ ಪುತ್ರಿಯನ್ನು ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದ ವಿಚಾರ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗುರಿಯಾಗಿತ್ತು.

Join Whatsapp