ಪ್ರತಿಷ್ಠಿತ ವಿವಿಗಳ ನಕಲಿ ಅಂಕಪಟ್ಟಿ ತಯಾರಿಕೆ ಜಾಲ ಭೇದಿಸಿದ ಸಿಸಿಬಿ: ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ

Prasthutha|

ಬೆಂಗಳೂರು: ದೇಶದ 25 ಕ್ಕೂ ಹೆಚ್ಚು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ( ಮಾರ್ಕ್ಸ್ ಕಾರ್ಡ್) ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು, ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -


ನಕಲಿ ಮಾರ್ಕ್ಸ್ ಕಾರ್ಡ್ ಮಾರಾಟದ ಜಾಲದಲ್ಲಿದ್ದ ಶಿಲ್ಪಾ , ಸುರೇಂದ್ರ ಕುಮಾರ್, ಶಾರದಾ ಹಾಗೂ ರಾಜಣ್ಣ ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ನಕಲಿ ಮಾರ್ಕ್ಸ್ ಕಾರ್ಡ್ ತಯಾರಿಸಿ ಮಾರಾಟ ಮಾಡುತ್ತಿದ್ದ ವೆಂಕಟೇಶ್ವರ ಇನ್ಸ್’ಸ್ಟಿಟ್ಯೂಟ್’ಗೆ ಸೇರಿದ ಮಹಾಲಕ್ಷ್ಮಿ ಲೇಔಟ್, ಕೊಡಿಗೇಹಳ್ಳಿ ಹಾಗೂ ಮಾರತ್ ಹಳ್ಳಿಯ ಮೂರು ಇನ್ಸ್’ಸ್ಟಿಟ್ಯೂಟ್’ಗಳ ಮೇಲೆ ಸಿಸಿಬಿಯ ಮೂರು ವಿಶೇಷ ತಂಡಗಳು ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಂಡು ಏಕಕಾಲದಲ್ಲಿ ದಾಳಿ ನಡೆಸಿ ಸುಮಾರು 12 ಗಂಟೆಗಳ ಕಾಲ ಶೋಧ ನಡೆಸಿ ಜಾಲವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿವೆ ಎಂದರು.

- Advertisement -


ಬಂಧಿತ ಆರೋಪಿಗಳಿಂದ ಮೂರು ಇನ್ಸ್’ಸ್ಟಿಟ್ಯೂಟ್’ಗಳಲ್ಲಿದ್ದ ಎಸ್ ಎಸ್ ಎಲ್ ಸಿ, ಪಿಯುಸಿ, ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಎಂಬಿಎ, ಇಂಜಿನಿಯರಿಂಗ್ ಸೇರಿ ವಿವಿಧ ಪದವಿಗೆ ನೀಡುತ್ತಿದ್ದ 1,500 ಕ್ಕೂ ಹೆಚ್ಚು ನಕಲಿ ಮಾರ್ಕ್ಸ್ ಕಾರ್ಡ್, 80 ಕ್ಕೂ ಹೆಚ್ಚು ಸೀಲ್ ಗಳು, 30 ಹಾಲೋಗ್ರಾಮ್ ಸ್ಟಿಕ್ಕರ್, 9 ಮೊಬೈಲ್’ಗಳು, ನಕಲಿ ಸುಮಾರು 1097 ದಾಖಲಾತಿ, ಪಿ.ಎಚ್.ಡಿ ಪುಸ್ತಕಗಳು, ಹಾರ್ಡ್ ಡಿಸ್ಕ್, ಪ್ರಿಂಟರ್, ಮೊಬೈಲ್’ಗಳು, ಸೀಲ್’ಗಳು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ವೆಂಕಟೇಶ್ವರ ಇನ್ಸ್ ಟಿಟ್ಯೂಟ್ ಸಂಸ್ಥೆಯ ವೆಬ್’ಸೈಟ್ ನಲ್ಲಿ ವಿವಿಧ ಪದವಿಗಳ ದೂರ ಶಿಕ್ಷಣ( ಕರಸ್ಪಾಂಡೆನ್ಸ್) ಕೋರ್ಸ್’ಗಳನ್ನು ಹೊಂದಿರುವ ಮಾಹಿತಿ ನೀಡಲಾಗಿತ್ತು. ಇದನ್ನು ನೋಡಿದ ದೂರುದಾರರು ಮಹಾಲಕ್ಷ್ಮೀ ಲೇಔಟ್’ನಲ್ಲಿರುವ ಕಚೇರಿಗೆ ಕಳೆದ ನ.2 ರಂದು ಹೋಗಿ ಕಚೇರಿಯ ಸ್ವಾಗತಕಾರರಾಗಿದ್ದ ಮಹಿಳೆಯನ್ನು ವಿಚಾರಿಸಿ ಬಿ.ಕಾಂ. ಡಿಗ್ರಿ ಪದವಿ ಅವಶ್ಯಕತೆ ಇದೆ ಎಂದು ಕೇಳಿದ್ದರು. ಆಗ ಮಹಿಳೆ ಒಂದು ಲಕ್ಷ ಹಣ ಕೊಟ್ಟರೆ ನಿಮಗೆ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಿಂದ ಪದವಿ ಪ್ರಮಾಣ ಪತ್ರ ಕೊಡುವುದಾಗಿ ತಿಳಿಸಿದ್ದರು.
ಅದರಂತೆ 40 ಸಾವಿರ ರೂ ನೀಡಿ ಕೊಟ್ಟು ರಶೀದಿ ಪಡೆದು ಪರೀಕ್ಷೆ ಬರೆಯಲು ಯಾವಾಗ ಬರಬೇಕೆಂದು ಕೇಳಿದಾಗ ಅದಕ್ಕೆ ಪರೀಕ್ಷೆ ಬರೆಯುವುದು ಬೇಡ ನಾವೇ ಬರೆಸಿ ನಿಮಗೆ ಅಂಕಪಟ್ಟಿ ಅನ್ನು ಕೊಡಿಸುತ್ತೇವೆ ಎಂದು ತಿಳಿಸಿದ್ದರು.


ಬಂಧಿತ ಆರೋಪಿಯ ವಾಟ್ಸ್’ಆಫ್ ನಂಬರ್’ನಿಂದ ದೂರುದಾರರಿಗೆ ಕಳೆದ ನ.26 ರಂದು ಬಿ.ಕಾಂ ಮೊದಲ ಹಾಗೂ ಎರಡನೇ ವರ್ಷದ ಅಂಕಪಟ್ಟಿಗಳನ್ನು ಕಳುಹಿಸಿದ್ದು ಅಂತಿಮ ವರ್ಷದ ಅಂಕಪಟ್ಟಿಯನ್ನು ಕೇಳಿದಾಗ ಉಳಿದ ಹಣವನ್ನು ಕೊಟ್ಟು ತೆಗೆದುಕೊಂಡು ಹೋಗುವಂತೆ ತಿಳಿಸಿದ್ದು ಈ ಬಗ್ಗೆ ಅನುಮಾನಗೊಂಡು ಪರೀಕ್ಷೆ ಬರೆಯದೆ ಅಂಕಪಟ್ಟಿ ಕಳುಹಿಸಿದ್ದ ವೆಂಕಟೇಶ್ವರ ಇನ್ಸ್’ಟ್ಯೂಟ್ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.


ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಸೇರಿ ದೇಶದ 28 ವಿಶ್ವವಿದ್ಯಾಲಯದ ಅಂಕ ಪಟ್ಟಿಗಳು ಪತ್ತೆಯಾಗಿದ್ದು, 50 ಸಾವಿರದಿಂದ ಒಂದು ಲಕ್ಷದವರಿಗೆ ಹಣ ಪಡೆದು ಅಂಕಪಟ್ಟಿ ನೀಡುತ್ತಿದ್ದು, ವೆಬ್’ಸೈಟ್ ಮೂಲಕ ದೂರ ಶಿಕ್ಷಣ ನೀಡುವ ನೆಪದಲ್ಲಿ ನಕಲಿ ಅಂಕಪಟ್ಟಿ ದಂಧೆ ನಡೆಸುತ್ತಿದ್ದರು ಎಂದು ಆಯುಕ್ತರು ತಿಳಿಸಿದರು.


ಪ್ರಮುಖ ಆರೋಪಿ ಶ್ರೀನಿವಾಸ ರೆಡ್ಡಿ ಮತ್ತವನ ಸಹಚರರು ಮೂರು ಕಡೆ ಕಚೇರಿಗಳನ್ನು ತೆರೆದು ಆನ್’ಲೈನ್’ನಲ್ಲಿ ಜಾಹೀರಾತನ್ನು ನೀಡಿ ಅವಶ್ಯಕತೆ ಇರುವ ವಿದ್ಯಾರ್ಥಿಗಳಿಗೆ ಆರೋಪಿಗಳು ಸಂಪರ್ಕಿಸಿದ ನಂತರ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸಿ ಅಂಕಪಟ್ಟಿಯನ್ನು ನೀಡುವುದಾಗಿ ಪುಸಲಾಯಿಸಿ ವಿದ್ಯಾರ್ಥಿಗಳಿಂದ ಹೆಚ್ಚು ಹೆಚ್ಚು ಹಣವನ್ನು ಪಡೆದುಕೊಂಡು ನಂತರ ಯಾವುದೇ ಪರೀಕ್ಷೆ ಬರೆಸದೆ ವಿದ್ಯಾರ್ಥಿಗಳಿಗೆ ರಾಜ್ಯದ ಹಾಗೂ ಹೊರ ರಾಜ್ಯಗಳ ವಿವಿಧ ವಿಶ್ವವಿದ್ಯಾಲಯಗಳಲ್ಲಿ ನೀಡುವ ಅಂಕಪಟ್ಟಿಯ ರೀತಿಯಲ್ಲೇ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಅಂಕಪಟ್ಟಿಯನ್ನು ವಿದ್ಯಾರ್ಥಿಗಳಿಗೆ ನೀಡಿ ಹಣವನ್ನು ಗಳಿಸುತ್ತಿದ್ದರು.


ಪಿಎಚ್’ಡಿ ಪದವಿಗೆ 10 ರಿಂದ 20ಲಕ್ಷದವರೆಗೆ ಹಣ ಪಡೆದು ಅಂಕಪಟ್ಟಿ ನೀಡಲಾಗುತ್ತಿರುವುದು ಪತ್ತೆಯಾಗಿದ್ದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ, ಡಿಸಿಪಿ ಯತೀಶ್ ಚಂದ್ರ, ಎಸಿಪಿ ರೀನಾ ಸುವರ್ಣ ಅವರಿದ್ದರು.



Join Whatsapp