ದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (CBSE) ದ್ವಿತೀಯ ಪಿಯುಸಿ ತರಗತಿ ಪರೀಕ್ಷೆಯ ಫಲಿತಾಂಶವು ಇಂದು (ಜುಲೈ 30) ಮಧ್ಯಾಹ್ನ 2 ಗಂಟೆಗೆ ಪ್ರಕಟಗೊಳ್ಳಲಿದೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶವು (CBSE Class 12 Result 2021) ಬೋರ್ಡ್ನ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಾಗಲಿದ್ದು, cbseresults.nic.in ಅಥವಾ digilocker.gov.in ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ.
ಅದಲ್ಲದೆ ಡಿಜಿಲಾಕರ್ ಆ್ಯಪ್ನಲ್ಲಿ ಕೂಡಾ ಫಲಿತಾಂಶ ನೋಡಬಹುದಾಗಿದ್ದು, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ಲಗತ್ತಿಸುವ ಮೂಲಕ ಫಲಿತಾಂಶ ಪಡೆಯಬಹುದಾಗಿದೆ. ಈ ಬಗ್ಗೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಅಧಿಕೃತ ಮಾಹಿತಿ ನೀಡಿದೆ.
ಕೊರೊನಾ ಎರಡನೇ ಅಲೆ ಕಾರಣದಿಂದಾಗಿ ಈ ವರ್ಷ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು. ಹೀಗಾಗಿ ಪರ್ಯಾಯ ಮೌಲ್ಯಮಾಪನ ನೀತಿಯಡಿ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಲಾಗುತ್ತಿದ್ದು, ಇಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಎಸ್ಎಸ್ಎಲ್ಸಿ, ಪ್ರಥಮ ಪಿಯುಸಿಯಲ್ಲಿ ವಿದ್ಯಾರ್ಥಿಗಳು ಪಡೆದುಕೊಂಡಿರುವ ಅಂಕಗಳ ಆಧಾರದ ಮೇಲೆ 12ನೇ ತರಗತಿಯ ಫಲಿತಾಂಶ ನೀಡಲು ಸಿಬಿಎಸ್ ಮಂಡಳಿ ಮುಂದಾಗಿದೆ. ಇಂದಿನ ಫಲಿತಾಂಶದ ಬಗ್ಗೆ ಯಾವುದೇ ಅಸಮಾಧಾನವಿದ್ದಲ್ಲಿ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಪಡೆಯಲು ಅವಕಾಶವನ್ನೂ ನೀಡಲಾಗಿದೆ.