5 ವರ್ಷಗಳಲ್ಲಿ ಸಿಬಿಐನಿಂದ ಸಂಸದರು, ಶಾಸಕರ ವಿರುದ್ಧ 56 ಪ್ರಕರಣಗಳು ದಾಖಲು: ಕೇಂದ್ರ ಸರ್ಕಾರ ಮಾಹಿತಿ

Prasthutha|

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಸಂಸದರು ಮತ್ತು ಶಾಸಕರ ವಿರುದ್ಧ ಸಿಬಿಐ 56 ಪ್ರಕರಣಗಳನ್ನು ದಾಖಲಿಸಿದೆ ಮತ್ತು 22 ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲೋಕಸಭೆಗೆ ತಿಳಿಸಿದ್ದಾರೆ.

- Advertisement -

ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ ಶಾಸಕರ ವಿರುದ್ಧ ದಾಖಲಾಗಿರುವ ಪ್ರಕರಣಗಳ ರಾಜ್ಯವಾರು ಮಾಹಿತಿ ಕುರಿತು ಕೇಳಲಾಗಿದ್ದ ಪ್ರಶ್ನೆಗೆ ಉತ್ತರಿಸಿದ ಅವರು, ದಾಖಲಾದ ಪ್ರಕರಣಗಳ ರಾಜ್ಯವಾರು ಅಂಕಿಅಂಶಗಳನ್ನು ನೀಡಿದರು.

ಅಂಕಿಅಂಶಗಳ ಪ್ರಕಾರ, 2017 ಮತ್ತು 2022 ರ ನಡುವೆ ಆಂಧ್ರಪ್ರದೇಶದಲ್ಲಿ 10 ಪ್ರಕರಣಗಳು ದಾಖಲಾಗಿವೆ. ಉತ್ತರ ಪ್ರದೇಶ ಮತ್ತು ಕೇರಳದಲ್ಲಿ ತಲಾ ಆರು, ಪಶ್ಚಿಮ ಬಂಗಾಳ ಮತ್ತು ಅರುಣಾಚಲ ಪ್ರದೇಶದಲ್ಲಿ ತಲಾ ಐದು, ತಮಿಳುನಾಡಿನಲ್ಲಿ ನಾಲ್ಕು, ಮಣಿಪುರ, ದೆಹಲಿ ಮತ್ತು ಬಿಹಾರದಲ್ಲಿ ತಲಾ ಮೂರು, ಜಮ್ಮು ಮತ್ತು ಕಾಶ್ಮೀರ ಮತ್ತು ಕರ್ನಾಟಕದಲ್ಲಿ ತಲಾ ಎರಡು ಮತ್ತು ಹರಿಯಾಣ, ಛತ್ತೀಸ್’ಗಢ, ಮೇಘಾಲಯ, ಉತ್ತರಾಖಂಡ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಲಕ್ಷದ್ವೀಪದಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ” ಎಂದು ಸಿಂಗ್ ಹೇಳಿದರು.

- Advertisement -

ಸಿಬಿಐ ದಾಖಲಿಸಿರುವ ಪ್ರಕರಣಗಳನ್ನು ಎದುರಿಸುತ್ತಿರುವ ಶಾಸಕರು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ವೈಎಸ್’ಆರ್ ಕಾಂಗ್ರೆಸ್ ಪಕ್ಷ, ಎಎಪಿ, ಆರ್’ಜೆಡಿ, ಬಿಜೆಪಿ, ಸಮಾಜವಾದಿ ಪಕ್ಷ, ಎಐಎಡಿಎಂಕೆ, ಟಿಡಿಪಿ, ಜನಸೇನಾ ಪಕ್ಷ ಮತ್ತು ಎನ್’ಸಿಪಿಗೆ ಸೇರಿದವರಾಗಿದ್ದಾರೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.

ಪ್ರಧಾನಿ ಮೋದಿ ಮಾಧ್ಯಮಗಳನ್ನುದ್ದೇಶಿಸಿ ಮಾಡಿದ ಭಾಷಣದೊಂದಿಗೆ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಚಾಲನೆ ದೊರಕಿತು.

Join Whatsapp