ನವದೆಹಲಿ: ವಿದೇಶಿ ದೇಣಿಗೆ ಪಡೆಯುವ ನಿಯಮಗಳನ್ನು ಉಲ್ಲಂಘಿಸಲು ಸರಕಾರೇತರ ಸಂಸ್ಥೆಗಳಿಗೆ ಅನುವು ಮಾಡಿಕೊಡುವ ಉದ್ದೇಶಕ್ಕಾಗಿ ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಸಹಿತ 40 ಸ್ಥಳಗಳಲ್ಲಿ ಸರಕಾರೇತರ ಸಂಸ್ಥೆಗಳ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಳಿ ನಡೆಸಿದ್ದು, ಐವರು ಸರಕಾರಿ ಅಧಿಕಾರಿಗಳು ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಲಂಚ ಪಡೆದುಕೊಂಡು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್ ಸಿಆರ್ ಎ)ಯ ನಿಯಮಗಳನ್ನು ಉಲ್ಲಂಘಿಸಲು ಎನ್ ಜಿಒಗಳಿಗೆ ಅನುವು ಮಾಡಿಕೊಟ್ಟಿರುವುದಾಗಿ ಸಿಬಿಐ ಮೂಲಗಳು ತಿಳಿಸಿವೆ.
ಈ ಸಂಬಂಧ ಕೇಂದ್ರ ಗೃಹ ಸಚಿವಾಲಯದಿಂದ ಸಿಬಿಐಗೆ ದೂರು ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಗೃಹ ಸಚಿವಾಲಯದ ಸಾರ್ವಜನಿಕ ಅಧಿಕಾರಿಗಳು, ಎನ್‌ಜಿಒ ಪ್ರತಿನಿಧಿಗಳು ಮತ್ತು ಮಧ್ಯವರ್ತಿಗಳು ವಿದೇಶಿ ನಿಧಿ ಮಂಜೂರಾತಿಯನ್ನು ಪಡೆಯಲು ಲಂಚವನ್ನು ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹನ್ನೆರಡು ಎನ್ ಜಿಒಗಳು ತನಿಖೆಯಲ್ಲಿವೆ ಎಂದು ಪ್ರಧಾನ ತನಿಖಾ ಸಂಸ್ಥೆ ಹೇಳಿದೆ.