ಡಿಕೆಶಿ ನಿವಾಸದ ಮೇಲೆ ಸಿಬಿಐ ನಡೆಸಿರುವ ದಾಳಿ ಫಾಶಿಸ್ಟ್ ಬಿಜೆಪಿ ಸರ್ಕಾರದ ಆಘೋಷಿತ ತುರ್ತು ಪರಿಸ್ಥಿತಿಯ ಮುಂದುವರೆದ ಭಾಗ: ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

Prasthutha|

ಬೆಂಗಳೂರು: ಪ್ರತಿಪಕ್ಷಗಳನ್ನು ಹೆದರಿಸಲು ತನಿಖಾ ಸಂಸ್ಥೆಗಳನ್ನು ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವ ಸರ್ಕಾರವೂ ಇಳಿಯದಷ್ಟು ಕೀಳು  ಮಟ್ಟಕ್ಕೆ ಇಳಿದು, ಊಹಿಸಲೂ ಸಾಧ್ಯವಿಲ್ಲದಷ್ಟು ಕ್ರೂರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಫ್ಯಾಶಿಸ್ಟ್ ಸರ್ಕಾರ ದಿನದಿಂದ ದಿನಕ್ಕೆ ಆ ಕ್ರೌರ್ಯವನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲೆ ಮೊನ್ನೆ ನಡೆದ ಮತ್ತೊಂದು ಸುತ್ತಿನ ಸಿಬಿಐ ದಾಳಿ ಈ ಫ್ಯಾಶಿಸ್ಟ್ ಬಿಜೆಪಿ ಸರ್ಕಾರದ ಅಘೋಷಿತ ತುರ್ತು ಪರಿಸ್ಥಿತಿಯ ಮುಂದುವರಿದ ಭಾಗ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಟೀಕಿಸಿದ್ದಾರೆ.

- Advertisement -

ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗಳ ಮೇಲೆ ತನಿಖಾ ಸಂಸ್ಥೆಗಳ ದುರ್ಬಳಕೆಯನ್ನು ಎಸ್ ಡಿಪಿಐ ಪಕ್ಷ ಖಂಡಿಸುತ್ತದೆ. ಡಿ.ಕೆ. ಶಿವಕುಮಾರ್ ಅವರ ಮೇಲೆ ನಡೆದ ಈ ದಾಳಿಯನ್ನು ನಮ್ಮ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶದ ಆಂತರಿಕ ಭದ್ರತೆ ಮತ್ತು ಆಡಳಿತ ವ್ಯವಸ್ಥೆಗೆ ತನಿಖಾ ಸಂಸ್ಥೆಗಳು ಬಹುಮುಖ್ಯವಾದ ಮೆಷಿನರಿ. ಅವುಗಳ ವಿಶ್ವಾಸಾರ್ಹತೆಯ ಜೊತೆ ಜೊತೆಗೆ ಅವುಗಳ ಮರ್ಯಾದೆಯನ್ನು ಕೂಡ ಈ ಫ್ಯಾಶಿಸ್ಟ್ ಸರ್ಕಾರ ಕೇವಲ ತನ್ನ ರಾಜಕೀಯ ಲಾಭಕ್ಕೆ ನಾಶ ಮಾಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಅವರು ಹೇಳಿದ್ದಾರೆ.

- Advertisement -

ಮೋದಿ ನೇತೃತ್ವದ ಕೋಮುವಾದಿ ಸರ್ಕಾರ ಆಡಳಿತಕ್ಕೆ ಬಂದ ನಂತರ ತನಿಖಾ ಸಂಸ್ಥೆಗಳು ನಡೆಸಿರುವ ದಾಳಿಗಳಲ್ಲಿ ಶೇಕಡ 85% ದಾಳಿಗಳು ವಿರೋಧ ಪಕ್ಷಗಳ ಮೇಲೆ ನಡೆದಿವೆ. ಕಾಂಗ್ರೆಸ್ ಅದರ ಬಹುಮುಖ್ಯ ಗುರಿಯಾಗಿದೆ. ಆಮ್ ಆದ್ಮಿ ಪಾರ್ಟಿ, ತೃಣಮೂಲ ಕಾಂಗ್ರೆಸ್, ಡಿ.ಎಂ.ಕೆ ಮುಂತಾದ ಪ್ರತಿಪಕ್ಷಗಳನ್ನು ಅದು ನಿರಂತರವಾಗಿ ಸಂವಿಧಾನ ವಿರೋಧಿ ಮಾರ್ಗಗಳ ಮೂಲಕ ಟಾರ್ಗೆಟ್ ಮಾಡಿದೆ. ಈ ದಾಳಿಗಳು ಪ್ರತಿಪಕ್ಷಗಳ ವಿರುದ್ಧವೇ ಏಕೆ ನಡೆಯುತ್ತಿವೆ? ಬಿಜೆಪಿ ಪಕ್ಷದಲ್ಲಿ ಭ್ರಷ್ಟರೇ ಇಲ್ಲವೆ? ಕರ್ನಾಟಕದಲ್ಲಿ 40% ಕಮಿಷನ್ ಆರೋಪ ಅಷ್ಟು ಜೋರಾಗಿದೆ. ಒಬ್ಬ ಕಾಂಟ್ರಾಕ್ಟರ್ ಈ ಸಂಬಂಧ ಆತ್ಮಹತ್ಯೆಯನ್ನೇ ಮಾಡಿಕೊಂಡಿದ್ದಾರೆ. ಸಿಎಂ ಕುರ್ಚಿಗೆ ಸಾವಿರಾರು ಕೋಟಿ ರೂ.ಬೇಡಿಕೆ ಇದೆ ಎಂದು ಸ್ವತಃ ಬಿಜೆಪಿ ಶಾಸಕರೊಬ್ಬರು ಆರೋಪಿಸಿದ್ದಾರೆ. ಇಷ್ಟೆಲ್ಲ ಇದ್ದರೂ ಒಬ್ಬೇ ಒಬ್ಬ ಬಿಜೆಪಿ ನಾಯಕನ ಮೇಲೆಯೂ ಕೂಡ ದಾಳಿಯಾಗಲಿ, ತನಿಖೆಯಾಗಲಿ ನಡೆದಿಲ್ಲ. ಇದು ಏನನ್ನು ಸೂಚಿಸುತ್ತದೆ ಎಂದು ಮಜೀದ್   ಪ್ರಶ್ನಿಸಿದ್ದಾರೆ.

ಇದಲ್ಲದೆ ಪ್ರಭುತ್ವವಿರೋಧಿ ಧ್ವನಿಗಳನ್ನು ಅಡಗಿಸಲು ಮತ್ತು ಜನರ ನಡುವೆ ಕಾರ್ಯ ನಿರ್ವಹಿಸುತ್ತಿರುವ ಸಂಘಟನೆಗಳನ್ನು ನಿಷೇಧ ಮಾಡಲು ತನಿಖಾ ಸಂಸ್ಥೆಗಳನ್ನು ಈ ಮನುವಾದಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದನ್ನು ಎಸ್ ಡಿಪಿಐ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp