ಬೆಂಗಳೂರು: ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ವಿರುದ್ಧದ ಆದಾಯಕ್ಕೂ ಮೀರಿದ ಆಸ್ತಿಗಳಿಕೆ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿರುವ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದೆ.
ಸರ್ಕಾರದ ಕ್ರಮ ರದ್ದಾದರೆ ಡಿ. ಕೆ. ಶಿವಕುಮಾರ್ ಮತ್ತೆ ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಆದರೆ ಅನುಮತಿ ವಾಪಸ್ ಪಡೆದ ಕ್ರಮ ಎತ್ತಿಹಿಡಿದರೆ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ದೊಡ್ಡ ವಿಪತ್ತಿನಿಂದ ಪಾರಾಗಲಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಿಬಿಐ ಸಲ್ಲಿಸಿದ್ದ ತಕರಾರು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್ ಮತ್ತು ಉಮೇಶ್ ಎಂ. ಅಡಿಗ ಅವರಿದ್ದ ವಿಭಾಗೀಯಪೀಠ ನಡೆಸಿತು.
ಸಿಬಿಐ ಪರವಾಗಿ ವಾದಿಸಿದ ವಿಶೇಷ ಸರಕಾರಿ ಅಭಿಯೋಜಕರು, ಸಿಬಿಐ ತನಿಖೆಗೆ ಒಮ್ಮೆ ನೀಡಿದ ಸಮ್ಮತಿ ಹಿಂಪಡೆಯುವ ಅಧಿಕಾರ ಸರ್ಕಾರಕ್ಕಿಲ್ಲ. ಈಗಾಗಲೇ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಳಿಸಿದೆ.
ಸಮ್ಮತಿ ಹಿಂಪಡೆದ ಸರ್ಕಾರದ ಕ್ರಮ ಕಾನೂನುಬಾಹಿರ, ಸಮ್ಮತಿ ಹಿಂಪಡೆದ ಕ್ರಮಕ್ಕೆ ಯಾವುದೇ ಮಾನ್ಯತೆ ಇಲ್ಲ. ಹಾಗಾಗಿ ಅನುಮತಿ ವಾಪಸ್ ಪಡೆದಿರುವ ಸರ್ಕಾರದ ಕ್ರಮ ರದ್ದುಪಡಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಕಳೆದ ವಾರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್, ಹಿಂದಿನ ಸರ್ಕಾರ ನೀಡಿರುವ ಸಮ್ಮತಿ ರಾಜಕೀಯ ಪ್ರೇರಿತವಾಗಿದೆ. ಅಂದಿನ ಮುಖ್ಯಮಂತ್ರಿಗಳ ಮೌಖಿಕ ಹೇಳಿಕೆ ಆಧರಿಸಿ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಆರೋಪ ಸಂಬಂಧ ತನಿಖಾಧಿಕಾರಿಗಳು ನಿರ್ಧರಿಸಬೇಕು, ಮುಖ್ಯಮಂತ್ರಿ, ಪ್ರಧಾನಮಂತ್ರಿ ತಿಳಿಸಿದ್ದಾರೆಂಬ ಕಾರಣದಿಂದ ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.