►ಜೀನ್ಸ್, ಟೀ ಶರ್ಟ್ ಧರಿಸುವಂತಿಲ್ಲ, ಗಡ್ಡ ಬೆಳೆಸುವಂತಿಲ್ಲ ಎಂದ ಸಿಬಿಐನ ನಿರ್ದೇಶಕ ಸುಭೋದ್ ಕುಮಾರ್ ಜೈಸ್ವಾಲ್
ಹೊಸದಿಲ್ಲಿ : ಕೇಂದ್ರಿಯ ತನಿಖಾ ದಳ (CBI) ಯು ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಹೊಸ ವಸ್ತ್ರ ಸಂಹಿತೆ ಜಾರಿಗೊಳಿಸಿದೆ. ಕಚೇರಿಗೆ ಬರುವ ಸಂದರ್ಭದಲ್ಲಿ ಜೀನ್ಸ್, ಟೀ ಶರ್ಟ್, ಸ್ಪೋರ್ಟ್ಸ್ ಶೂಗಳಂಥ ಯಾವುದೇ ಉಡುಪುಗಳನ್ನು ಧರಿಸುವಂತಿಲ್ಲ. ಅದೇ ರೀತಿ ಗಡ್ಡ ಬೆಳೆಸುವಂತಿಲ್ಲ ಎಂದು ಸಿಬಿಐನ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಆದೇಶ ಮಾಡಿದ್ದಾರೆ.
ಪುರುಷರು ಶರ್ಟ್, ಫಾರ್ಮಲ್ ಪ್ಯಾಂಟ್ ಮತ್ತು ಫಾರ್ಮಲ್ ಶೂಗಳನ್ನು ಧರಿಸಿ, ಗಡ್ಡವನ್ನು ಸಂಪೂರ್ಣವಾಗಿ ತೆಗೆದು ಕಚೇರಿಗೆ ಬರಬೇಕಾಗಿದೆ. ಸಿಬಿಐನ ಮಹಿಳಾ ಉದ್ಯೋಗಿಗಳು ಸೀರೆ, ಸೂಟ್, ಫಾರ್ಮಲ್ ಶರ್ಟ್ ಮತ್ತು ಪ್ಯಾಂಟ್ ಮಾತ್ರ ಧರಿಸಲು ಅವಕಾಶ ನೀಡಲಾಗಿದೆ. ದೇಶಾದ್ಯಂತ ಸಿಬಿಐ ಕಚೇರಿಗಳಿಗೆ ಈ ನಿಯಮ ಜಾರಿಗೆ ಬರಲಿದ್ದು, ಆದೇಶ ಪಾಲನೆಯ ಬಗ್ಗೆ ನೋಡಿಕೊಳ್ಳಲು ಶಾಖೆಗಳ ಮುಖ್ಯಸ್ಥರಿಗೆ ಆದೇಶದಲ್ಲಿ ಸೂಚಿಸಲಾಗಿದೆ.
ಇದು ಸಮತೋಲಿತ ಆದೇಶ. ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ಯಾವಾಗಲೂ ಔಪಚಾರಿಕ ಉಡುಗೆ ಧರಿಸಲು ಪ್ರಾರಂಭಿಸಬೇಕು. ವರ್ಷಗಳಿಂದ ಅನೇಕ ಮಂದಿ ಜೀನ್ಸ್ ಮತ್ತು ಟೀ ಶರ್ಟ್ ಸೇರಿದಂತೆ ಸಾಮಾನ್ಯ ಉಡುಗೆಗಳನ್ನು ಧರಿಸುತ್ತಿದ್ದಾರೆ. ಯಾರೂ ಈ ಬಗ್ಗೆ ಪ್ರಶ್ನಿಸಿಲ್ಲ, ಕಚೇರಿಗೆ ಯಾವ ರೀತಿ ಬರಬೇಕೆಂದೂ ಹೇಳಲಿಲ್ಲ. ಸಿಬಿಐ ಅಧಿಕಾರಿಗಳು ಕನಿಷ್ಠ ಔಪಚಾರಿಕ ಕಾಲರ್ ಹೊಂದಿರುವ ಶರ್ಟ್, ಪ್ಯಾಂಟ್ ಹಾಗೂ ಶೂಗಳನ್ನು ಧರಿಸಬೇಕು ಎಂದು ಈ ಬಗ್ಗೆ ಪ್ರತಿಕ್ರಿಯಿಸಿದ ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.