ಮದ್ಯ ಹಗರಣದ ನೆಪದಲ್ಲಿ ಸಿಬಿಐ,ಇಡಿ ಅನಗತ್ಯ ತೊಂದರೆ ನೀಡುತ್ತಿದೆ: ಕೇಜ್ರಿವಾಲ್

Prasthutha|

ನವದೆಹಲಿ: ಮದ್ಯ ಹಗರಣದ ನೆಪದಲ್ಲಿ ತನಿಖಾ ಸಂಸ್ಥೆಗಳಾದ ಕೇಂದ್ರ ತನಿಖಾ ದಳ, ಜಾರಿ ನಿರ್ದೇಶನಾಲವು ಪ್ರತಿಯೊಬ್ಬರಿಗೂ ಅನಗತ್ಯವಾಗಿ ತೊಂದರೆ ನೀಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

- Advertisement -

ಅಲ್ಲದೆ, ದೇಶವು ಈ ರೀತಿ ನಡೆಯಿಂದಾಗಿ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೆಫ್ಟಿನೆಂಟ್ ಗವರ್ನರ್, ಸಿಬಿಐ ಮತ್ತು ಬಿಜೆಪಿಯು, ದೆಹಲಿ ಸರ್ಕಾರ ಮದ್ಯ ಹಗರಣದಲ್ಲಿ ಹೆಚ್ಚಿನ ಪ್ರಮಾಣದ ಹಣವನ್ನು ಗುಳುಂ ಮಾಡಿದೆ ಎಂಬ ಆರೋಪದ ನೈಜತೆ ಅರ್ಥವಾಗುತ್ತಿಲ್ಲ ಎಂದು ತಿಳಿಸಿದರು.

- Advertisement -

ರದ್ದಾದ ದೆಹಲಿ ಅಬಕಾರಿ ನೀತಿ 2021 – 2022 ರಲ್ಲಿನ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ತನಿಖೆಯ ನೆಪದಲ್ಲಿ ಇಡಿ ದೇಶಾದ್ಯಂತ ಸುಮಾರು 40 ಕಡೆಗಳಲ್ಲಿ ಹೊಸತಾಗಿ ದಾಳಿಗಳನ್ನು ಆರಂಭಿಸಿದ ಬಳಿಕ ಅರವಿಂದ್ ಕೇಜ್ರಿವಾಲ್ ಅವರಿಂದ ಹೇಳಿಕೆ ಹೊರಬಿದ್ದಿದೆ.

ನೆಲ್ಲೂರು ಮತ್ತು ಇತರ ಕೆಲವು ರಾಜ್ಯಗಳಾದ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ದೆಹಲಿಯ ಹಲವು ನಗರಗಳಲ್ಲಿ ಮದ್ಯದ ಉದ್ಯಮಿಗಳು, ವಿತರಕರು ಮತ್ತು ಸರಬರಾಜುಗಾರರ ಜಾಲಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮದ್ಯ ಹಗರಣವು 8000 ಕೋಟಿ ರೂ.ಗೆ ಸಂಬಂಧಿಸಿದ್ದು ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರೆ, ಲೆಫ್ಟಿನೆಂಟ್ ಜನರಲ್ 144 ಕೋಟಿ ರೂ. ಹಗರಣ ಎಂದು ಹೇಳಿದ್ದಾರೆ. ಇನ್ನು ಈ ಹಗರಣವು 1 ಕೋಟಿ ರೂ. ಸಂಬಂಧಿಸಿದ್ದು ಎಂದು ಸಿಬಿಐ ತನ್ನ ಎಫ್.ಐ.ಆರ್’ನಲ್ಲಿ ತಿಳಿಸಿದೆ. ವಾಸ್ತವದಲ್ಲಿ ಎಷ್ಟು ಮೊತ್ತ ಹಗರಣ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ಮದ್ಯ ಹಗರಣಕ್ಕೆ ಸಿಬಿಐ ಪ್ರಕರಣ ದಾಖಲಿಸಿದ್ದು, ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ ಮತ್ತು ಕೆಲವು ಅಧಿಕಾರಿಗಳನ್ನು ಆರೋಪಿಗಳಾಗಿ ಹೆಸರಿಸಿದೆ. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 19 ರಂದು ಸಿಸೋಡಿಯಾ ಅವರ ನಿವಾಸ ಸೇರಿದಂತೆ ವಿವಿಧೆಡೆ ಸಿಬಿಐ ದಾಳಿ ನಡೆಸಿತ್ತು.

ಈ ಮಧ್ಯೆ ದೆಹಲಿಯಲ್ಲಿ 16 ಹೊಸ ಭೂಕುಸಿತ ತಾಣಗಳನ್ನು ನಿರ್ಮಿಸಿ ಅದನ್ನು ಕಸದ ನಗರವನ್ನಾಗಿ ಮಾಡಲು ಬಿಜೆಪಿ ಆಡಳಿತದ ಸ್ಥಳೀಯ ಸಂಸ್ಥೆಗಳು ಯೋಜನೆ ರೂಪಿಸುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.



Join Whatsapp