ಕಾವೇರಿ, ಕೊಡವ ಮಹಿಳೆಯರ ಅವಹೇಳನ ಪ್ರಕರಣ; ಮುಜುಗರಕ್ಕೊಳಗಾದ ಬಿಜೆಪಿ, ಕೊಡವ ಜನಾಂಗ

Prasthutha|

ಕೊಡಗು: ಕೊಡವರ ಕುಲದೇವಿ ಕಾವೇರಿ ಹಾಗೂ ಕೊಡವ ಮಹಿಳೆಯರನ್ನು ಮುಸ್ಲಿಮರು ಅವಹೇಳನ ಮಾಡಿದ್ದಾರೆಂದು ಹಲವು ದಿನಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಇದೀಗ ಅವಹೇಳನ ಪ್ರಕರಣದಲ್ಲಿ ಬಿಜೆಪಿ ಮುಖಂಡನ ಪುತ್ರ ಕರಿನೆರವಂಡ ದಿವಿನ್ ದೇವಯ್ಯ (29) ಬಂಧಿತನಾಗಿರುವುದು ಕೊಡವ ಜನಾಂಗ ಹಾಗೂ ಬಿಜೆಪಿಗೆ ತೀವ್ರ ಮುಜುಗರ ತಂದೊಡ್ಡಿದೆ.

- Advertisement -

ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಸದಸ್ಯ ಕರಿನೆರವಂಡ ರಮೇಶ್ ಪೊನ್ನಣ್ಣ ಅವರ ಪುತ್ರ ದಿವಿನ್ ದೇವಯ್ಯ ಬಂಧನ ಆಗುತ್ತಿದ್ದಂತೆ ಕೊಡವರು ತಲೆತಗ್ಗಿಸಿದ್ದಾರೆ. ವಿಧಾನ ಪರಿಷತ್ ಬಿಜೆಪಿ ಸದಸ್ಯರೊಬ್ಬರ ಪರಮಾಪ್ತ ಬಳಗದಲ್ಲಿ ಗುರುತಿಸಿ ಕೊಂಡಿರುವ ಮುಖಂಡನ ಪುತ್ರನ ಬಂಧನದಿಂದ ಬಿಜೆಪಿ ಕೂಡ ಕಸಿವಿಸಿಗೊಂಡಿದೆ.

ಎಂಎಲ್ಸಿ ಬೆಂಬಲಿಗರಾಗಿ ಹಲವು ವರ್ಷದಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ವಿರಾಜಪೇಟೆ ತಾಲೂಕಿನ ಪಾಲಂಗಾಲ ಗ್ರಾಮದ ಕರಿನೆರವಂಡ ರಮೇಶ್ ಪೊನ್ನಣ್ಣ ಶ್ರೀಮಂತ ಕಾಫಿ ಬೆಳೆಗಾರರಾಗಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿ ಆಗಿರುವ ದಿವಿನ್ ದೇವಯ್ಯ ಹಲವು ತಿಂಗಳಿನಿಂದ (ವರ್ಕ್ ಫ್ರಮ್ ಹೋಮ್ )ಮನೆಯಲ್ಲೇ ಕೆಲಸ ನಿರ್ವಹಿಸುತ್ತಿದ್ದ.

- Advertisement -

ಇನ್ಸ್ಟಾ ಗ್ರಾಮ್ ನಲ್ಲಿ ನಕಲಿ ಖಾತೆಯಲ್ಲಿ ಕಾವೇರಿ ಮಾತೆ ಹಾಗೂ ಕೊಡವ ಮಹಿಳೆಯರನ್ನು ಅವಹೇಳನ ಮಾಡಲಾದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಿದ್ದಾಪುರದ ಮುಸ್ಲಿಮ್ ಯುವಕನೊಬ್ಬನ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಡಲಾರಂಭಿಸಿತ್ತು. ತಕ್ಷಣ ಯುವಕನನ್ನು ಕೊಡಗು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿ ಮೊಬೈಲ್ ವಶ ಪಡಿಸಿಕೊಂಡಿದ್ದರು.

ಮುಸ್ಲಿಂ ಯುವಕ ಕಾವೇರಿ ಮತ್ತು ಕೊಡವ ಮಹಿಳೆಯರ ಅವಹೇಳನ ಮಾಡಿದ್ದಾನೆಂದು ಕೊಡವರು, ಬಿಜೆಪಿ, ಸಂಘ- ಪರಿವಾರದ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದರು. ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಕೂಡ  ಪ್ರಕರಣವನ್ನು ಖಂಡಿಸಿದ್ದರು.

ಜು.18 ರಂದು ವಿರಾಜಪೇಟೆಯಲ್ಲಿ ಪ್ರತಿಭಟನೆ ಮಾಡುವುದಾಗಿ ವಿಶ್ವ ಹಿಂದು ಪರಿಷತ್, ಭಜರಂಗದಳ ಘೋಷಿಸಿ, ಈ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಗಡಿಪಾರು ಮಾಡಬೇಕೆಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದರು. ಇದೀಗ ದಿವಿನ್ ದೇವಯ್ಯ ಬಂಧನ ಆಗುತ್ತಿದ್ದಂತೆ ಪ್ರತಿಭಟನೆ ಕೈಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.

ಆರೋಪಿ ಮುಸ್ಲಿಮ್ ಆಗಿದ್ದರೆ ಮಾತ್ರ ಪ್ರತಿಭಟನೆ, ಆರೋಪಿ ಹಿಂದೂ ಆದರೆ ಮೌನಕ್ಕೆ ಶರಣಾಗಿರುವ ಸಂಘಪರಿವಾರದ ಧೋರಣೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗಿದೆ.



Join Whatsapp