ಮಡಿಕೇರಿ: ಸಾಮಾಜಿಕ ಜಾಲತಾಣವಾದ ಇನ್ಸ್ ಸ್ಟಾಗ್ರಾಮ್ ನಲ್ಲಿ ಕಾವೇರಿಯನ್ನು ಹಾಗೂ ಕೊಡವ ಜನಾಂಗವನ್ನು ಅವಹೇಳನ ಮಾಡಿರುವ ಪ್ರಕರಣದಲ್ಲಿ ಅಮಾಯಕ ವಿದ್ಯಾರ್ಥಿಯೊಬ್ಬನ ಫೋಟೋ ಬಳಸಿ ಅಪಪ್ರಚಾರ ನಡೆಸುತ್ತಿರುವ ಬಗ್ಗೆ ದೂರು ದಾಖಲಾಗಿದೆ.
ಇನ್ಸ್ ಸ್ಟಾಗ್ರಾಮ್ ನಲ್ಲಿ ಮುಹಮ್ಮದ್ ಅಶ್ಫಾಕ್ ಎಂಬ ಹೆಸರಿನ ವ್ಯಕ್ತಿ ಕಾವೇರಿಯನ್ನು ಹಾಗೂ ಕೊಡವರನ್ನು ಅವಹೇಳನ ಮಾಡಿರುವುದಾಗಿ ಕೊಡವ ಸಂಘಟನೆಗಳು, ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ವಿವಿಧ ಸಂಘಟನೆಗಳು ಜುಲೈ 7 ರಂದು ಕೊಡಗಿನ ವಿವಿಧ ಪೊಲಿಸ್ ಠಾಣೆಗಳಲ್ಲಿ ದೂರು ದಾಖಲು ಮಾಡಿದ್ದವು. ಕೂಡಲೇ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದವು.
ಇದರ ಮಧ್ಯೆ ಈ ಪ್ರಕರಣದಲ್ಲಿ ಯಾವುದೇ ಸಂಬಂಧ ಇಲ್ಲದ ತನ್ನ ಮಗನ ಫೋಟೋ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಯ ತಂದೆ ಮಡಿಕೇರಿ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದ ಸೈನುದ್ದೀನ್ ದೂರು ನೀಡಿದವರು. ಕಾವೇರಿ ಹಾಗೂ ಕೊಡವರ ಅವಹೇಳನ ಮಾಡಿರುವ ಘಟನೆಯ ದೂರು ನೀಡಿರುವ ಫೋಟೋ ಹಾಗೂ ವೀಡಿಯೋ ಜೊತೆಗೆ ತನ್ನ ಮಗ ಮುಹಮ್ಮದ್ ಅಶ್ಫಾಕ್ ನ ಫೋಟೋವನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದೆ. ಈ ಘಟನೆಗೂ ನನ್ನ ಮಗನಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಈ ರೀತಿ ಮಾಡಿರುವುದರಿಂದ ಇಡೀ ಕುಟುಂಬ ಮಾನಸಿಕವಾಗಿ ನೊಂದಿದ್ದು, ಮಗನ ಫೋಟೋ ಬಳಸಿ ಅಪಪ್ರಚಾರ ನಡೆಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.