ಮಡಿಕೇರಿ: ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಬರಹಗಳೊಂದಿಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕಿಡಿಗೇಡಿತನಗಳು ಇತ್ತೀಚಿಗೆ ವ್ಯಾಪಕವಾಗುತ್ತಿದ್ದು, ಇದು ತೀರಾ ಖಂಡನೀಯವಾಗಿದೆ. ಜನರ ಭಾವನೆಗಳಿಗೆ ಧಕ್ಕೆ ತರುವ ಈ ಸಮಾಜದ್ರೋಹಿ ಕೃತ್ಯಗಳ ಸಂಚನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಡಿವಾಣ ಹೇರಬೇಕು ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ಹಿರಿಯ ವಕೀಲ ಎ. ಎಸ್. ಪೊನ್ನಣ್ಣ ಒತ್ತಾಯಿಸಿದ್ದಾರೆ.
ಈ ಕುರಿತು ಶನಿವಾರದಂದು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾಮಾಜಿಕ ಮಾಧ್ಯಮವೊಂದಲ್ಲಿ ಕೊಡಗಿನ ಆರಾಧ್ಯ ದೇವ ಕಾವೇರಿ ಮಾತೆ ಮತ್ತು ಕೊಡವ ಜನಾಂಗದ ವಿರುದ್ಧ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ. ಇದು ಕೋಮು ಭಾವನೆಯನ್ನು ಕೆರಳಿಸಿ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವ ಪೂರ್ವ ನಿಯೋಜಿತ ಷಡ್ಯಂತ್ರದ ಭಾಗವಾಗಿದೆ. ಈ ರೀತಿಯ ಕಿಡಿಗೇಡಿತನ ಉತ್ತಮ ಬೆಳವಣಿಗೆಗಳಲ್ಲ ಎಂದು ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಂದು ಧರ್ಮ, ಜಾತಿ ಮತ್ತು ಅದರ ಆಚಾರ-ವಿಚಾರ -ಸಂಸ್ಕೃತಿಗಳ ಬಗ್ಗೆ ಆಯಾ ಧರ್ಮದವರಿಗೆ ಗೌರವ ಮತ್ತು ನಂಬಿಕೆ ಇರುತ್ತದೆ. ಆದ್ದರಿಂದ ಯಾವುದೇ ಧರ್ಮದವರ ಭಾವನೆಗೆ ಧಕ್ಕೆ ತರುವುದು ಸರಿಯಲ್ಲ. ಇದನ್ನು ಸಹಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಪೊನ್ನಣ್ಣ ಅವರು, ಇದೀಗ ಈ ಈ ಕಿಡಿಗೇಡಿತನ ಕೃತ್ಯದಿಂದಾಗಿ ಜಿಲ್ಲೆಯ ಜನರ ಧಾರ್ಮಿಕ ಭಾವನೆಯನ್ನು ಕೆರಳಿಸಿದಂತಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಹೊಣೆಗಾರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯಾಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಕೊಡಗಿನಲ್ಲಿ ಅಶಾಂತಿ ಸೃಷ್ಟಿಸುವುದರ ಹಿಂದೆ ಯಾವ ಶಕ್ತಿಗಳು ಕೆಲಸ ಮಾಡುತ್ತಿದೆ ಎಂಬ ಸತ್ಯಾಂಶವನ್ನು ಬಯಲಿಗೆಳೆದು ಜನತೆಗೆ ನೈಜತೆ ತಿಳಿಸುವ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ. ಆದ್ದರಿಂದ ಅವಹೇಳನಕಾರಿ ಬರಹ ಪ್ರಕಟಿಸಿದ ವ್ಯಕ್ತಿಯನ್ನು ಕೂಡಲೇ ಪೊಲೀಸ್ ಇಲಾಖೆ ಪತ್ತೆಹಚ್ಚಬೇಕು. ನಿಷ್ಪಕ್ಷಪಾತವಾದ ಸೂಕ್ತ ತನಿಖೆಯ ಮೂಲಕ ಸಂಚಿನ ಹಿಂದೆ ಭಾಗಿಯಾದವರೆಲ್ಲಾರನ್ನೂ ಕಂಡುಹಿಡಿದು ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಎ.ಎಸ್. ಪೊನ್ನಣ್ಣ ಅವರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.