ಬೆಂಗಳೂರು: ಕರ್ನಾಟಕ-ತಮಿಳುನಾಡು ರಾಜ್ಯಗಳ ನಡುವೆ ತಲೆದೋರಿರುವ ಕಾವೇರಿ ಜಲ ವಿವಾದದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿರುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದರು. ಕಾವೇರಿ ನೀರು ಹರಿಸಲು ತೀರ್ಪು ಬಂದಿರುವುದಕ್ಕೆ ಸುಪ್ರೀಂ ಕೋರ್ಟ್ ಅನ್ನು ದೂರುವುದಿಲ್ಲ, ಇದಕ್ಕೆ ರಾಜ್ಯ ಸರ್ಕಾರದ ವೈಫಲ್ಯ ಕಾರಣ ಎಂದು ಆರೋಪಿಸಿದರು. ಕಾವೇರಿ ವಿಚಾರವಾಗಿ ಮಾತನಾಡುತ್ತ ಹೆಚ್ ಡಿ ದೇವೇಗೌಡ ಕಣ್ಣೀರು ಹಾಕಿದ್ದಾರೆ.
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾವು ಪ್ರಧಾನಿಗಳ ಗಮನಕ್ಕೆ ತಂದಿರುವ ವಾಸ್ತವಾಂಶಗಳ ಆಧಾರದಡಿ ಕೇಂದ್ರ ಸರ್ಕಾರ ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್ಗೆ ಒಂದು ಅರ್ಜಿ ಹಾಕಿಸಬೇಕು. ಅವರಿಗೆ ಸಿಕ್ಕಿರುವ ಮಾಹಿತಿ ಆಧಾರದಲ್ಲಿ ನಿಷ್ಪಕ್ಷಪಾತವಾದ ತಜ್ಞರ ಸಮಿತಿಯನ್ನು ಕಳುಹಿಸಿ ಎಲ್ಲಾ ಜಲಾಶಯಗಳ ಪರಿಶೀಲನೆ ಮಾಡಿ ನೀರು ಬಿಡಲು ಸಾಧ್ಯವಾ? ಬೆಳೆ ಸ್ಥಿತಿಗತಿ ಏನು? ಯಾವ ಯಾವ ಜಲಾಶಯಗಳಲ್ಲಿ ಎಷ್ಟು ನೀರಿದೆ? ಎಂಬುದನ್ನು ಅರಿತುಕೊಳ್ಳಬೇಕು. ಈಗಾಗಲೇ ಅನ್ಯಾಯ ಆಗೋಗಿದೆ. ಮುಂದಾದರೂ ಆಗುವ ಅನ್ಯಾಯವನ್ನು ತಡೆಗಟ್ಟಲು ಜಲ ಶಕ್ತಿ ಇಲಾಖೆಗೆ ಹೇಳಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ ತಜ್ಞರ ಸಮಿತಿಯನ್ನು ಕಳುಹಿಸಲು ನಿವೇದನೆ ಮಾಡಬೇಕು ಎಂದು ಪ್ರಧಾನಿಗೆ ಪ್ರಾರ್ಥನೆ ಮಾಡುತ್ತೇನೆ ಎಂದರು.