ಕೇಂದ್ರ ಸರ್ಕಾರದ ನಿರ್ಲಕ್ಷ್ಯ, ವೈಫಲ್ಯವೇ ನವೀನ್ ಸಾವಿಗೆ ಪ್ರಮುಖ ಕಾರಣ: ಯು.ಟಿ.ಖಾದರ್ ಕಿಡಿ

Prasthutha|

ಬೆಂಗಳೂರು: ಉಕ್ರೇನ್ ಮತ್ತು ರಷ್ಯಾ ನಡುವಣ ಯುದ್ಧದಲ್ಲಿ ನಮ್ಮ ರಾಜ್ಯದ ಯುವಕ ನವೀನ್ ಮೃತಪಟ್ಟಿರುವುದು ಅತ್ಯಂತ ನೋವಿನ ವಿಚಾರ. ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಹಾಗೂ ವೈಫಲ್ಯವೇ ನವೀನ್ ಅವರ ಸಾವಿಗೆ ಪ್ರಮುಖ ಕಾರಣ. ರಾಜತಾಂತ್ರಿಕತೆ ಹಾಗೂ ವಿದೇಶಾಂಗ ವ್ಯವಹಾರಗಳಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ ಖಾದರ್ ಆರೋಪಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದಿಂದ ಬಹಳ ವಿದ್ಯಾರ್ಥಿಗಳಿದ್ದರೂ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಕನ್ನಡಿಗರನ್ನು ಕರೆ ತರುವಲ್ಲಿ ವಿಫಲವಾಗಿದೆ. ಕೇಂದ್ರ ಸರ್ಕಾರ ಕೇವಲ ಪ್ರಚಾರ ವಿಚಾರದಲ್ಲಿ ಗಮನಹರಿಸುತ್ತಿದೆಯೇ ಹೊರತು, ಮಾಡಬೇಕಿರುವ ಕೆಲಸದ ಬಗ್ಗೆ ಯೋಚಿಸುತ್ತಿಲ್ಲ ಎಂದು ಕಿಡಿಕಾರಿದರು. ಈ ಯುದ್ಧ ಕುವೈತ್ ಮೇಲೆ ಆದ ರಾತ್ರೋರಾತ್ರಿ ಆದ ಯುದ್ಧವಲ್ಲ. ಕುವೈತ್ ಮೇಲೆ ಏಕಾಏಕಿ ದಾಳಿ ಆದಾಗಲೂ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗಿತ್ತು. ನಾಗರಿಕ ದಂಗೆ ಎದ್ದಾಗ ರಕ್ಷಣೆ ಕಷ್ಟ. ಲಿಬಿಯಾದಲ್ಲಿ ನಾಗರೀಕ ದಂಗೆ ಎದ್ದಾಗಲೂ ಮನಮೋಹನ್ ಸಿಂಗ್ ಅವರ ಸರ್ಕಾರ ಭಾರತೀಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಆಗ ಯಾವುದೇ ಪ್ರಚಾರ ಮಾಡಲಿಲ್ಲ. ಆದರೆ ಇದು ಎರಡು ದೇಶದ ಇದು ಅಂತಾರಾಷ್ಟ್ರೀಯ ಯುದ್ಧ. ಈಗ ಪ್ರಯಾಣಿಕರ ವಿಮಾನಕ್ಕೆ ರಕ್ಷಣೆಯಾಗಿ ಜೆಟ್ ವಿಮಾನಗಳನ್ನು ಕಳುಹಿಸುವ ಸೌಕರ್ಯಗಳಿದ್ದರೂ ಕೇಂದ್ರ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಪ್ರತಿ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂಬ ಕಾರಣಕ್ಕೆ ನಾವು ಆರಂಭದಲ್ಲಿ ಮಾತನಾಡಿರಲಿಲ್ಲ. ಆದರೆ ನಮ್ಮ ರಾಜ್ಯದ ಸಹೋದರ ಮೃತಪಟ್ಟಿರುವಾಗ ಇವರ ವೈಫಲ್ಯವನ್ನು ಪ್ರಶ್ನೆ ಮಾಡಲೇಬೇಕಾಗುತ್ತದೆ.

 ಈ ಯುದ್ಧ ನಡೆಯಲಿದೆ ಎಂದು ಒಂದು ತಿಂಗಳ ಮುಂಚಿಯೇ ಗೊತ್ತಾಗಿದೆ. ಮಾಧ್ಯಮಗಳು ಕೂಡ ಯುದ್ಧ ನಡೆಯುವ ಮುನ್ಸೂಚನೆ ಬಗ್ಗೆ ವರದಿ ಮಾಡುತ್ತಲೇ ಇದ್ದವು. ಆದರೆ ಸರ್ಕಾರ ಏನು ಮಾಡುತ್ತಿತ್ತು. ಉಕ್ರೇನ್ ನಲ್ಲಿ ಭಾರತೀಯರು ಎಲ್ಲೆಲ್ಲಿ ಇದ್ದಾರೆ? ಎಂಬ ಮಾಹಿತಿ ಹೊಂದಿತ್ತಾ? ಕೇವಲ ಪತ್ರ ಬರೆದರೆ ಕೆಲಸ ಮುಗಿದುಹೋಯಿತಾ? ಕೇಂದ್ರ ಸರ್ಕಾರ ಈ ಸಮಸ್ಯೆ ಬಗೆಹರಿಸಲು ಕೈಗೊಂಡ ಕ್ರಮಗಳಾದರೂ ಏನು? 25 ಸಾವಿರ ಇದ್ದ ವಿಮಾನ ಟಿಕೆಟ್ ದರವನ್ನು 1 ಲಕ್ಷಕ್ಕೆ ಹೆಚ್ಚಿಸಲಾಯಿತು. ಆಗ ಸರ್ಕಾರ ಏನು ಮಾಡುತ್ತಿತ್ತು? ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸಲು ಮುಂದಾಗಲಿಲ್ಲ. ಸರ್ಕಾರಕ್ಕೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯೇ ಇರಲಿಲ್ಲವೇ? ಎಂದು ಪ್ರಶ್ನಿಸಿದರು. ಈಗ ಭಾರತಕ್ಕೆ ಬಂದಿರುವ ವಿದ್ಯಾರ್ಥಿಗಳು ತಾವೇ ವಿಮಾನ ಟಿಕೆಟ್ ಬುಕ್ ಮಾಡಿಕೊಂಡು ಬಂದಿದ್ದಾರೆ. ಅದರಿಂದ ಪ್ರಚಾರ ಪಡೆಯಲು ನಮ್ಮ ಸಚಿವರು ಬಾಂಬೆ ಹಾಗೂ ದೆಹಲಿಗೆ ಹೋಗಿದ್ದಾರೆ. ಯುದ್ಧದಿಂದ ಪಾರಾಗಿ ಬಂದವರನ್ನು ಮನೆಗೆ ಕಳುಹಿಸುವ ಬದಲು ಇವರ ಭಾಷಣವನ್ನು ಆ ವಿದ್ಯಾರ್ಥಿಗಳು ಕೇಳಬೇಕು.

- Advertisement -

ಇವರಿಗೆ ನಾಚಿಕೆಯಾಗುವುದಿಲ್ಲವೇ? ನೀವು ವಿಫಲ ಆಗಿದ್ದರೂ ಪ್ರಚಾರ ಪಡೆಯುವುದು ದೇಶಕ್ಕೆ ಕಪ್ಪು ಚುಕ್ಕೆ. ಈ ಸರ್ಕಾರ ಮಕ್ಕಳ ಪೋಷಕರಿಗೆ ಸ್ಪಷ್ಟ ಸಂದೇಶ ಕೊಡಬೇಕು. ಅಲ್ಲಿನ ವಿದ್ಯಾರ್ಥಿಗಳನ್ನು ಕರೆತರಲು ಏನಾದರೂ ತಂತ್ರಗಾರಿಕೆ ಇದೆಯಾ? ರೂಪುರೇಷೆ ಇದೆಯಾ? ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು, ಯಾರನ್ನು ಸಂಪರ್ಕಿಸಬೇಕು ಎಂಬ ಕಾರ್ಯಸೂಚಿ ನಿಮ್ಮ ಬಳಿ ಇದೆಯಾ? ನಮಗೆ ಪೋಷಕರೊಬ್ಬರು ಕರೆ ಮಾಡಿದ್ದರು. ಆಕೆಯ ಪುತ್ರಿ ತಮ್ಮಷ್ಟಕ್ಕೆ ತಾವೇ ಗಡಿ ಭಾಗಕ್ಕೆ ಬಂದರೂ ಅಲ್ಲಿ ಅವರಿಗೆ ಯಾವುದೇ ಸಹಾಯ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇವರು ಕೊಟ್ಟಿರುವ ಸಹಾಯವಾಣಿಯಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಕಿಡಿಕಾರಿದರು.

Join Whatsapp