►ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿವೆ ಎಂದಾಗ ಪೊಲೀಸರು ಪರಾರಿ!
ಹೊಸದಿಲ್ಲಿ: ಅಂಗಡಿಯೊಳಗೆ ಅಕ್ರಮ ಬಂದೂಕು ಇಟ್ಟು ಮುಸ್ಲಿಮ್ ಯುವಕನೊಬ್ಬನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪೊಲೀಸರು ವಿಫಲ ಪ್ರಯತ್ನ ನಡೆಸಿದ ಘಟನೆ ಉತ್ತರಪ್ರದೇಶದ ಅಮೇಥಿ ಜಿಲ್ಲೆಯ ಬಾದಲ್ ಘರ್ ಗ್ರಾಮದಲ್ಲಿ ನಡೆದಿದೆ. ಗುಲ್ಜಾರ್ ಅಹ್ಮದ್ ಅವರ ಹಾರ್ಡ್ ವೇರ್ ಅಂಗಡಿಯಲ್ಲಿ ಉತ್ತರಪ್ರದೇಶ ಪೊಲೀಸರು ಅಕ್ರಮ ಬಂದೂಕು ತಂದಿಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊ ತುಣುಕಿನಲ್ಲಿ, ಇತರ ಪೊಲೀಸರೊಂದಿಗೆ ಆಗಮಿಸಿದ ಕಾನ್ ಸ್ಟೆಬಲ್, ಅಂಗಡಿಯಲ್ಲಿ ಬಂದೂಕು ಇಟ್ಟು ನಂತರ ಅಂಗಡಿ ಮಾಲಕನನ್ನು ಬಂಧಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ ಸಿಸಿಟಿವಿ ಕ್ಯಾಮೆರಾ ಬಗ್ಗೆ ತಿಳಿಸಿದಾಗ ಅಂಗಡಿ ಮಾಲಕನನ್ನು ಸ್ಥಳದಲ್ಲೇ ಬಿಟ್ಟು ಪೊಲೀಸರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ವೀಡಿಯೋ ವೀಕ್ಷಿಸಿ….
ಈ ಕುರಿತು ಪ್ರತಿಕ್ರಿಯಿಸಿದ ಗುಲ್ಜಾರ್ ಅಹ್ಮದ್, ತನ್ನ ಅಂಗಡಿಗೆ ಬಂದೂಕು ತಂದಿಟ್ಟು ನಂತರ ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಿರುವಾಗಿ ಪೊಲೀಸರು ಆರೋಪಿಸಿದಾಗ ಅಂಗಡಿಯಲ್ಲಿ ಎರಡು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ, ನಿಮ್ಮ ಕೃತ್ಯವೆಲ್ಲಾ ಕ್ಯಾಮೆರಾದಲ್ಲಿ ದಾಖಲಾಗಿದೆ ಎಂದು ತಿಳಿಸಿದಾಗ ಪೊಲೀಸರು ಇಂಗು ತಿಂದ ಮಂಗನಂತಾಗಿದ್ದಾರೆ. ನಂತರ ವೀಡಿಯೋ ತುಣುಕನ್ನು ಡಿಲೀಟ್ ಮಾಡುವಂತೆ ಪೊಲೀಸರು ಒತ್ತಡ ಹೇರಿದ್ದಾರೆ ಎಂದು ನವ ಭಾರತ್ ಟೈಮ್ಸ್ ಗೆ ತಿಳಿಸಿದ್ದಾರೆ.
ಮಾರ್ಚ್ 16 ರಂದು ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತದೆ.