ಲಕ್ನೋ: ಸ್ವಾತಂತ್ರ್ಯ ಬಂದು 75 ವರ್ಷಗಳೇ ಉರುಳಿದರೂ ಸಮಾಜದಲ್ಲಿ ಆಳವಾಗಿ ಬೇರೂರಿರುವ ಜಾತಿ ವ್ಯವಸ್ಥೆಯೆನ್ನುವ ಪೀಡೆಯನ್ನು ತೊಡೆಯಲಾಗಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಬೇಸರಿಸಿದೆ.
ಪರಿಶಿಷ್ಟ ಜಾತಿಗೆ ಸೇರಿದ ಗ್ರಾಮಪಂಚಾಯತಿ ಅಧಿಕಾರಿ ಹಾಗೂ ಮೇಲ್ವರ್ಗದ ಮಹಿಳೆಯೊಬ್ಬರ ನಡುವಿನ ಆತ್ಮೀಯತೆಯು ಜಾತಿ ವಿಷಮತೆಯ ಸ್ವರೂಪ ಪಡೆದು ಗ್ರಾಮಾಧಿಕಾರಿಯನ್ನು ಹತ್ಯೆ ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾ. ರಾಹುಲ್ ಚತುರ್ವೇದಿ ಅವರಿದ್ದ ಏಕಸದಸ್ಯ ಪೀಠವು ಅಭಿಪ್ರಾಯಪಟ್ಟಿತು.
ನಾವು ನಮ್ಮನ್ನು ಶಿಕ್ಷಿತ ಸಮಾಜ ಎಂದೇ ಕರೆದುಕೊಳ್ಳುತ್ತೇವೆ, ಆದರೆ ನಮ್ಮ ಜೀವನದಲ್ಲಿ ನಾವು ಇಬ್ಬಗೆಯ ನೀತಿಯನ್ನು ಅನುಸರಿಸುತ್ತೇವೆ. ಸಮಾಜದಲ್ಲಿನ ಪ್ರಜ್ಞಾವಂತರು ಹಾಗೂ ಉಳ್ಳವರ ಮೇಲೆ ದುರ್ಬಲರು ಹಾಗೂ ತುಳಿತಕ್ಕೆ ಒಳಗಾದವರನ್ನು ರಕ್ಷಿಸುವ ನೈತಿಕ ಹೊಣೆಗಾರಿಕೆ ಇದ್ದು ಆ ಮೂಲಕ ಅವರಲ್ಲಿ ಸುರಕ್ಷತೆಯ ಭಾವವನ್ನು ಮೂಡಿಸಬೇಕಿರುತ್ತದೆ ಎಂದು ಏಕಸದಸ್ಯ ಪೀಠವು ಅಭಿಪ್ರಾಯಪಟ್ಟಿತು.
ಅಂತಿಮವಾಗಿ ನ್ಯಾಯಾಲಯವು ಆರೋಪಿ ಅರ್ಜಿದಾರ ಸನ್ನಿ ಸಿಂಗ್ ಮನವಿಯನ್ನು ಪುರಸ್ಕರಿಸಿ ಅವರಿಗೆ ಜಾಮೀನು ನೀಡಿತು. ಆದರೆ, ಪ್ರಕರಣದ ಸಂಬಂಧ ಯಾವುದೇ ಸಾಕ್ಷ್ಯಗಳನ್ನು ನಾಶಪಡಿಸದಂತೆ ಕಠಿಣ ಸೂಚನೆ ನೀಡಿತು.
(ಕೃಪೆ: ಬಾರ್ & ಬೆಂಚ್)