ರಾಯಚೂರು: ಕುಡಿದು ಅವಹೇಳನ ಮಾಡಿದ್ದಾನೆಂದು ಆರೋಪಿಸಿ ಸವರ್ಣೀಯರ ಗುಂಪೊಂದು ದಲಿತ ವ್ಯಕ್ತಿಯೊಬ್ಬನನ್ನು ಲೈಟಿನ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ ಘಟನೆ ಮುದಗಲ್ ತಾಲೂಕಿನ ಕಿಲಾರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಬೈಲಪ್ಪ ಹನುಮಂತಪ್ಪ ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಈ ಘಟನೆ ಕುರಿತು ಬೈಲಪ್ಪ ನೀಡಿದ ದೂರಿನ ಅನ್ವಯ ದುರುಗನಗೌಡ, ಶಂಕರಗೌಡ, ಬುಕ್ಕನಗೌಡ, ಗದ್ದಮ್ಮ, ಹನುಮನಗೌಡ, ಸೂರಪ್ಪಗೌಡ, ಅಮರೇಗೌಡ, ಲಕ್ಷ್ಮಮ್ಮ, ನೀಲನಗೌಡ ಮತ್ತು ತಿಮ್ಮನಗೌಡ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.
ಗುಂಪೊಂದು ನಮ್ಮ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೆ ಹೊರಗಡೆ ಮನೆಯಿಂದ ಎಳೆದುತಂದು ಲೈಟಿನ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದಾರೆ ಎಂದು ಬೈಲಪ್ಪ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.