ಕೋವಿಡ್ ವೇಳೆ ಪರೀಕ್ಷೆ | ಸರಕಾರದ ನಿರ್ಧಾರಕ್ಕೆ ಆಕ್ಷೇಪಿಸಿದ ದಲಿತ ಪ್ರೊಫೆಸರ್ ಗೆ ಜಾತಿ ನಿಂದನೆ

Prasthutha|

ಕೊಲ್ಕತಾ : ಎಡಪಂಥೀಯ ಚಿಂತನೆಯ ಪ್ರಭಾವ ವ್ಯಾಪಕವಾಗಿರುವ ಪಶ್ಚಿಮ ಬಂಗಾಳದಲ್ಲಿ ಓರ್ವ ದಲಿತ ಪ್ರೊಫೆಸರ್ ಕೋವಿಡ್ -19 ವೇಳೆ ಪರೀಕ್ಷೆ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣ ಪೋಸ್ಟ್ ಹಾಕಿದ್ದಕ್ಕಾಗಿ ಜಾತಿ ನಿಂದನೆ ಮಾಡಿದ ಘಟನೆ ನೀಡಿದೆ.

ಜಾಧವ್ ಪುರ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಮರೂನಾ ಮುರ್ಮು ಇತಿಹಾಸ ವಿಭಾಗದಲ್ಲಿ ಅಸೋಸಿಯೇಟೆಡ್ ಪ್ರೊಫೆಸರ್ ಆಗಿ, ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕೋವಿಡ್ 19 ತುರ್ತಿನ ನಡುವೆಯೂ ಪರೀಕ್ಷೆ ನಡೆಸುತ್ತಿರುವ ಸರಕಾರದ ನಿರ್ಧಾರಕ್ಕೆ ದೇಶಾದ್ಯಂತ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಈ ವೇಳೆ ಪ್ರೊ. ಮುರ್ಮು ಅವರು ಸೆ.2ರಂದು ಸ್ನೇಹಿತರೊಬ್ಬರ ಫೇಸ್ ಬುಕ್ ಪೋಸ್ಟ್ ನಲ್ಲಿ ತಮ್ಮ ಅಭಿಪ್ರಾಯವನ್ನು ಪ್ರಕಟಿಸಿದ್ದರು. ಸರಕಾರದ ನಿರ್ಧಾರದಿಂದ ವಿದ್ಯಾರ್ಥಿಗಳ ಭವಿಷ್ಯ ಅಪಾಯಕ್ಕೆ ಸಿಲುಕಿದೆ ಎಂದು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

- Advertisement -

ಅವರ ಈ ಪೋಸ್ಟ್ ಗೆ ಕಾಮೆಂಟ್ ಮಾಡಿರುವ ಯುವತಿಯೊಬ್ಬಳು ಜಾತಿಯನ್ನು ಹಿಡಿದು ಅವಮಾನಿಸಿದ್ದಾಳೆ. “ವಿದ್ಯಾರ್ಥಿಗಳ ಒಂದು ವರ್ಷದ ಶೈಕ್ಷಣಿಕ ವರ್ಷ ನಷ್ಟವಾಗುತ್ತದೋ, ಇಲ್ಲವೋ ಎಂಬುದರ ಬಗ್ಗೆ ತಿಳಿಯಲು ನಿಮ್ಮಂತೆ ಪ್ರೊಫೆಸರ್ ಆಗಬೇಕಾಗಿಲ್ಲ. ಒಂದು ವರ್ಷ ನಷ್ಟದ ವಿಷಯವಲ್ಲ, ಹೇಗೆ ಕೆಲವು ಅನರ್ಹ ವ್ಯಕ್ತಿಗಳು ಮತ್ತು ಅಸಮರ್ಥ ವ್ಯಕ್ತಿಗಳು ಮೀಸಲಾತಿಯ ಲಾಭ ಪಡೆಯುತ್ತಾರೆ ಮ್ತತು ತಮ್ಮ ಜಾತಿಯು ಅವರ ಯಶಸ್ಸಿಗೆ ಹೇಗೆ ಸಹಾಯವಾಗುತ್ತದೆ ಎಂಬುದು ಮುಖ್ಯವಾದ ವಿಷಯ. ನಿಜವಾದ ಅರ್ಹರು ಯಾವತ್ತೂ ಹಿಂದೆಯೇ ಬೀಳುತ್ತಿರುತ್ತಾರೆ. ನಮ್ಮ ಹೆತ್ತವರು ಅಪಾಯ ತೆಗೆದುಕೊಂಡು ಹೊರಹೋಗುತ್ತಾರೆ, ನಮಗೆ ಆಹಾರ ಪಡೆಯುತ್ತಾರೆ. ಆದರೆ, ಕೆಲವರು ಮನೆಯಲ್ಲೇ ಕುಳಿತು, ಏನೂ ಮಾಡದೆ ವೇತನ ಪಡೆಯುತ್ತಾರೆ” ಎಂದು ಯುವತಿ ಕಾಮೆಂಟ್ ಮಾಡಿದ್ದಾಳೆ.

ಅದಾದ ಕೆಲವು ಗಂಟೆಗಳ ಬಳಿಕ, ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಅದೇ ಯುವತಿ, ‘’ಇಂದು ಮುಂಜಾನೆ, ಓರ್ವ ಸಂತಾಲ್ ‘ಮುರ್ಮು’ಗೆ ಆಕೆಯ ಆದಿವಾಸಿ ಮೂಲದ ಬಗ್ಗೆ ನೆನಪಿಸಿದೆ. ಅದೂ ಸೌಜನ್ಯಯುತವಾಗಿ. ಆದರೆ, ಆಕೆಯನ್ನು ಇಷ್ಟಪಡುವವರು, ಪ್ರೊಫೆಸರ್ ಗಳೆಂದು ಹೇಳಿಕೊಳ್ಳುವವರು ಕೇವಲ ಸಂಬಳ ಪಡೆದು ದೇಹ ಬೆಳೆಸಿಕೊಳ್ಳುವವರು ಎಂಬುದನ್ನು ಕೆಲವರು ನನಗೆ ಅರ್ಥ ಮಾಡಿಸಿದರು’’ ಎಂದು ಪೋಸ್ಟ್ ಮಾಡಿದ್ದಾಳೆ.

“ಈ ಘಟನೆಯಿಂದ ನನಗೆ ಆಘಾತವೇನೂ ಆಗಿಲ್ಲ, ತಾನು ಇಂಥ ಜಾತಿ ನಿಂದನೆಗಳನ್ನು ಎದುರಿಸಿಯೇ ಬೆಳೆದವಳು” ಎಂದು ಪ್ರೊ. ಮುರ್ಮು ಹೇಳಿದ್ದಾರೆ ಎಂದು ‘ದ ವೈರ್’ ವರದಿ ಮಾಡಿದೆ. ಇನ್ನೊಂದೆಡೆ, ಪ್ರೊ. ಮುರ್ಮುಗೆ ಈಗ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪ್ರೊ. ಮುರ್ಮು ಪರವಾಗಿ ಸಾವಿರಾರು ಕಾಮೆಂಟ್ ಗಳು ಪ್ರಕಟವಾಗಿವೆ.

ಪಶ್ಚಿಮ ಬಂಗಾಳದಲ್ಲಿ ದೀರ್ಘ ಕಾಲ ಎಡಪಂಥೀಯ ಸರಕಾರಗಳು ಆಡಳಿತ ನಡೆಸಿದ ಕಾರಣಕ್ಕಾಗಿ, ಅಲ್ಲಿ ಪ್ರಗತಿಪರ ಮನೋಸ್ಥಿತಿ ಹೆಚ್ಚಾಗಿದೆ ಎಂದೇ ಭಾವಿಸಲಾಗುತ್ತದೆ. ಆದರೆ, ಯುವ ಸಮುದಾಯದಲ್ಲಿ ಮೀಸಲಾತಿ ಕುರಿತ ಇಂತದ್ದೊಂದು ನಿಕೃಷ್ಟ ಮನೋಸ್ಥಿತಿ ಬೆಳವಣಿಗೆಯಾಗಿರುವುದು ಅಲ್ಲಿನ ಶಿಕ್ಷಣ ವ್ಯವಸ್ಥೆಯ ದೋಷವನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತಿದೆ. ಇದು ಮುಂದಿನ ದಿನಗಳಲ್ಲಿ ಅಪಾಯಕಾರಿ ಮನೋಸ್ಥಿತಿಯನ್ನು ಪೋಷಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.

ಫೋಟೊ ಕೃಪೆ : ದ ಹಿಂದೂ

- Advertisement -