ನವದೆಹಲಿ: ಸಂಘಟನೆಯ ಹೆಸರಿಗೆ ಮಸಿ ಬಳಿಯುವ ಮತ್ತು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಅದರ ಸದಸ್ಯರನ್ನು ಬಂಧಿಸುವ ತೆಲಂಗಾಣ ಪೊಲೀಸರ ಪ್ರಯತ್ನ ಖಂಡನೀಯ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಶಾಕಿಫ್ ಹೇಳಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಿಝಾಮಾಬಾದ್ ಪೊಲೀಸರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರನ್ನು ಬಂಧಿಸಿ ಅವರ ವಿರುದ್ಧ ಯುಎಪಿಎ ಪ್ರಕರಣ ದಾಖಲಿಸಿದ್ದಾರೆ. ಅವರ ವಿರುದ್ಧ ಮಾಡಲಾಗಿರುವ ಆರೋಪಗಳು ನಿರಾಧಾರ ಮತ್ತು ಈ ಪ್ರಕರಣವು ಪೊಲೀಸರು ಸಂಪೂರ್ಣವಾಗಿ ಹೆಣೆದ ಕಟ್ಟುಕಥೆಯಾಗಿದೆ. ಇಡೀ ರಾಜ್ಯದಲ್ಲಿ ಸಂಘಟನೆಯನ್ನು ಗುರಿಪಡಿಸುವ ಗುಪ್ತ ಉದ್ದೇಶದೊಂದಿಗೆ ಇದೀಗ ಉದ್ದೇಶಪೂರ್ವಕವಾಗಿ ಪಾಪ್ಯುಲರ್ ಫ್ರಂಟ್ ನ ಮತ್ತಷ್ಟು ಸದಸ್ಯರನ್ನು ಈ ಪ್ರಕರಣದಲ್ಲಿ ಸೇರಿಸಲಾಗುತ್ತಿದೆ. ಈ ಪ್ರಕರಣದ ಹಿಂದೆ, ರಾಜ್ಯದಲ್ಲಿ ಪಾಪ್ಯುಲರ್ ಫ್ರಂಟ್ ನ ಕಾರ್ಯಚಟುವಟಿಕೆಗಳನ್ನು ಮತ್ತು ಬೆಳವಣಿಗೆಯನ್ನು ತಡೆಯುವ ಉದ್ದೇಶವಿರುವುದು ಬಹಳ ಸ್ಪಷ್ಟವಾಗಿದೆ. ನಿಝಾಮಾಬಾದ್ ನಲ್ಲಿ ಮೊದಲು ಬಂಧಿತರಾದ ಅಬ್ದುಲ್ ಖಾದರ್, ಕಳೆದ 30 ವರ್ಷಗಳಿಂದ ಮಾರ್ಷಲ್ ಆರ್ಟ್ಸ್ ತರಬೇತುದಾರರಾಗಿದ್ದಾರೆ. ತನ್ನ ವೃತ್ತಿಯ ಭಾಗವಾಗಿ ಮಾರ್ಷಲ್ ಆರ್ಟ್ಸ್ ತರಗತಿಗಳನ್ನು ನಡೆಸುತ್ತಾ ಆತ ತರಬೇತುದಾರರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಎರಡನೇಯದಾಗಿ, ಪೊಲೀಸರು ಆರೋಪಿಸಿದಂತೆ ಜುಲೈ 4ರಂದು ಆ ಸ್ಥಳದಲ್ಲಿ ಪಿ.ಎಫ್.ಐನ ಸಭೆ ಇರಲಿಲ್ಲ. ಇದು ನಿಝಾಮಾಬಾದ್ ಪೊಲೀಸರು ಸಂಪೂರ್ಣ ಮಿಶ್ರಣದೊಂದಿಗೆ ನಡೆಸಿದ ನಿರೂಪಣೆಯಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಅಮರಾವತಿ ಹತ್ಯೆಯನ್ನು ಪಾಪ್ಯುಲರ್ ಫ್ರಂಟ್ ನೊಂದಿಗೆ ಸಂಪರ್ಕ ಕಲ್ಪಿಸುವ ಪ್ರಯತ್ನಗಳು ಕೂಡ ಸಂಘಟನೆಯ ವಿರುದ್ಧ ನಡೆಸಲಾಗುತ್ತಿರುವ ಅಭಿಯಾನದ ಮುಂದುವರಿದ ಭಾಗವಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಪಿ.ಎಫ್.ಐ ಸಂಪರ್ಕ ಕಲ್ಪಿಸುವ ಸೂಚನೆಯೊಂದಿಗೆ ಪ್ರಕರಣದ ತನಿಖೆಯಲ್ಲಿ ಎನ್.ಐ.ಎಯನ್ನು ತರಲಾಯಿತು. ಈ ಪ್ರಕರಣದಲ್ಲಿ ಎನ್.ಐ.ಎಯ ಈವರೆಗಿನ ವರ್ತನೆಯು, ಇದು ಪಾಪ್ಯುಲರ್ ಫ್ರಂಟನ್ನು ಗುರಿಪಡಿಸುವ ರಾಜಕೀಯ ನಿರ್ಧಾರವಾಗಿದೆ ಎಂಬ ವಿಚಾರವನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಹಗೆತನದ ರಾಜಕೀಯ ಮತ್ತು ಕೇಂದ್ರೀಯ ಏಜೆನ್ಸಿಗಳ ದುರ್ಬಳಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಮುಹಮ್ಮದ್ ಶಾಕಿಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.