ಪ್ರಚೋದನಕಾರಿ ಭಾಷಣ: ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲು

Prasthutha|

ಉಡುಪಿ: ಉಡುಪಿಯ ಖಾಸಗಿ ಕಾಲೇಜಿನ ವಿಡಿಯೋ ಚಿತ್ರೀಕರಣ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಡುಪಿ ಜಿಲ್ಲಾ ಘಟಕದಿಂದ ಗುರುವಾರ ಉಡುಪಿ ನಗರದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿದ ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -


ಉಡುಪಿ ವಿಡಿಯೋ ಪ್ರಕರಣ ಖಂಡಿಸಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ವತಿಯಿಂದ ನಡೆದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಶರಣ್ ಪಂಪ್ ವೆಲ್, ಸನಾತನ ಹಿಂದೂ ಸಂಸ್ಕೃತಿ ನಾಶ ಮಾಡಲು ಹಿಂದೆ ರಾಕ್ಷಸಿಯರು ಬಂದಿದ್ದರು. ಈಗ ಜಿಹಾದಿ ರಾಕ್ಷಸಿಯರ ಮೂಲಕ ಹಿಂದೂ ಹೆಣ್ಮಕ್ಕಳ ಮಾನ ತೆಗೆಯಲು ಬಂದಿದ್ದಾರೆ. ಜಿಹಾದಿ ರಾಕ್ಷಸಿಯರಿಗೆ ಹಿಂದು ರಕ್ಷಕರಾಗಿ ಉತ್ತರ ಕೊಡಲಿದ್ದೇವೆ. ಇಂತಹ ದಾಳಿ ಇಂದಿಗೇ ಕೊನೆಯಾಗಬೇಕು. ಸೌಟು, ಪೊರಕೆ ಹಿಡಿಯುವ ತಾಯಂದಿರ ಕೈಗಳು ಶಸ್ತ್ರ ಹಿಡಿಯಬೇಕು. ಅನ್ಯಾಯಕ್ಕೆದುರಾಗಿ ತಲವಾರು ಹಿಡಿಯಬೇಕು. ನಮ್ಮ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂಬ ಎಚ್ಚರಿಕೆ ಕೊಡಬೇಕಾಗಿದೆ ಎಂದು ಹೇಳಿಕೆ ನೀಡಿದ್ದರು.


ಮುಸಲ್ಮಾನರು ಹಿಂದು ಯುವತಿಯರು, ಶ್ರದ್ಧಾಕೇಂದ್ರಗಳನ್ನು ಟಾರ್ಗೆಟ್ ಮಾಡಿದ್ದಾರೆ. ನೇತ್ರ ಕಾಲೇಜಿನ ಡಾ.ಅಬ್ದುಲ್ ಖಾದರ್ ತಪ್ಪು ಮಾಡಿದ ವಿದ್ಯಾರ್ಥಿನಿಯರಿಗೆ ಐದು ಬಾರಿ ನೋಟ್ಸ್ ಬರೆಯುವ ಶಿಕ್ಷೆ ನೀಡಿದ್ದಾರೆ. ಈ ಶಿಕ್ಷೆಯನ್ನು ಬ್ಯೂಟಿಫುಲ್ ಶಿಕ್ಷೆ ಅಂತಾ ಖಾದರ್ ಹೇಳಿದ್ದಾನೆ. ಅಬ್ದುಲ್ ಖಾದರನ್ನು ಕಾಲೇಜಿನಿಂದಲೇ ಅಮಾನತು ಮಾಡಬೇಕು. ಖಾದರ್ ಗೆ ಎಚ್ಚರಿಕೆ ನೀಡುತ್ತಿದ್ದೇನೆ, ಬ್ಯೂಟಿಫುಲ್ ಶಿಕ್ಷೆ ನೀಡೋಕೆ ನಮಗೂ ಗೊತ್ತಿದೆ. ನಮ್ಮ ಕಾರ್ಯಕರ್ತರೂ ನಿನಗೆ ಬ್ಯೂಟಿ ಫುಲ್ ಶಿಕ್ಷೆ ನೀಡುತ್ತಾರೆ. ಮುಸಲ್ಮಾನರು ಮಕ್ಕಳಿರುವಾಗಲೇ ಮದ್ರಸಾದಲ್ಲಿ ಈ ರೀತಿಯ ಶಿಕ್ಷಣ ನೀಡುತ್ತಿರುವ ಬಗ್ಗೆ ಅನುಮಾನ ಇದೆ. ರಾಜ್ಯ ಸರ್ಕಾರ ಕೂಡಲೇ ಮದ್ರಸ ಶಿಕ್ಷಣವನ್ನು ಬ್ಯಾನ್ ಮಾಡಬೇಕು. ಉಡುಪಿ ಕಾಲೇಜಿನ ವಿಡಿಯೋ ಪ್ರಕರಣದ ಹಿಂದೆ ಭಯೋತ್ಪಾದಕ ಕೃತ್ಯದ ಹುನ್ನಾರ ಇದೆಯೇ ಎಂಬುದನ್ನು ಪತ್ತೆ ಹಚ್ಚಲು ಪ್ರಕರಣವನ್ನು ಎನ್ಐಎಗೆ ಒಪ್ಪಿಸಬೇಕು ಎಂದು ಶರಣ್ ಪಂಪ್ವೆಲ್ ಪ್ರಚೋದನಕಾರಿಯಾಗಿ ಮಾತನಾಡಿದ್ದರು.

- Advertisement -


ಅದೇ ರೀತಿ ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಕೂಡ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬಂದೋಬಸ್ತಿನಲ್ಲಿದ್ದ ಸ್ಥಳೀಯ ಅಧಿಕಾರಿ ನೀಡಿದ ದೂರಿನಂತೆ ಉಡುಪಿ ನಗರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.



Join Whatsapp