ಬೀದಿ ನಾಯಿ ಹಾವಳಿ ಹಿನ್ನೆಲೆ: ಏರ್ ಗನ್ ಹಿಡಿದು ವಿದ್ಯಾರ್ಥಿಗಳನ್ನು ಮದರಸಾಕ್ಕೆ ಕರೆದೊಯ್ದ ವ್ಯಕ್ತಿಯ ವಿರುದ್ಧಪ್ರಕರಣ ದಾಖಲು

Prasthutha|

ಕಾಸರಗೋಡು: ಬೀದಿ ನಾಯಿಗಳ ಉಪಟಳದ ಹಿನ್ನೆಲೆಯಲ್ಲಿ ಏರ್ ಗನ್ ಹಿಡಿದು ವಿದ್ಯಾರ್ಥಿಗಳನ್ನು ಮದರಸಾಕ್ಕೆ ಕರೆದೊಯ್ಯುತ್ತಿದ್ದ ವ್ಯಕ್ತಿಯ ವಿರುದ್ಧ ಗಲಭೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿರುವ  ಘಟನೆ  ಬೇಕಲದಲ್ಲಿ ನಡೆದಿದೆ.

- Advertisement -

ವ್ಯಕ್ತಿ ಏರ್ ಗನ್ ಹಿಡಿದು ಮದ್ರಸಾ ವಿದ್ಯಾರ್ಥಿಗಳೊಂದಿಗೆ ಹೋಗುತ್ತಿರುವ ವೀಡಿಯೋ  ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಬೇಕಲ ಹದ್ದಾದ್ ನಗರ ನಿವಾಸಿ ಸಮೀರ್ ಯಾನೆ ಟೈಗರ್ ಸಮೀರ್  ಎಂಬವರು  ಬೀದಿ ನಾಯಿಗಳ ದಾಳಿಯಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ತಮ್ಮ  ಏರ್ ಗನ್ ಉಪಯೋಗಿಸಿದ್ದರು.  ಈ ಹಿನ್ನೆಲೆಯಲ್ಲಿ  ಐಪಿಸಿ ಸೆಕ್ಷನ್ 153 ರ ಅಡಿಯಲ್ಲಿ ಸಮಾಜದಲ್ಲಿ ಗಲಭೆಗೆ ಕಾರಣವಾಗುವ ರೀತಿಯಲ್ಲಿ ವೀಡಿಯೊವನ್ನು ಚಿತ್ರೀಕರಿಸಿ ಪ್ರಸಾರ ಮಾಡಿದ ಆರೋಪದ ಮೇಲೆ ಬೇಕಲ್ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದಾರೆ.

- Advertisement -

ಈ ಬಗ್ಗೆ ಪ್ರತಿಕ್ರಿಯಿಸಿದ ಸಮೀರ್, ನಾಯಿಗಳನ್ನು ಕೊಲ್ಲುವುದಲ್ಲ, ಬದಲಾಗಿ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೈಯಲ್ಲಿ ಏರ್ ಗನ್ ಹಿಡಿದಿದ್ದೆ. ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಿದರೆ ಶೂಟ್ ಮಾಡಲೂ ಸಿದ್ಧನಿದ್ದೆ. ಈ ವಿಷಯದ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಗನ್ ಬಳಸಿದ್ದೇನೆ ಎಂದು ತಿಳಿಸಿದರು.

ನಾನೊಬ್ಬ ಪೋಷಕ. ನನ್ನ ಮಕ್ಕಳಿಗೆ ರಕ್ಷಣೆ ನೀಡುವುದು ನನ್ನ ಜವಾಬ್ದಾರಿ. ಈ ಊರಲ್ಲಿ ಕೆಲವು ದಿನಗಳಿಂದ ಬೀದಿ ನಾಯಿ ಕಾಟ ಹೆಚ್ಚಾಗಿದ್ದು, ನನ್ನ ಮಕ್ಕಳು ಮತ್ತು ನೆರೆಯ ಮಕ್ಕಳು ನಾಯಿಯ ಭಯದಿಂದಾಗಿ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದರು. ಹಾಗಾಗಿ ನಾನು ಅನಿವಾರ್ಯವಾಗಿ ಗನ್ ಹಿಡಿದು ಅವರ ಜತೆ ಹೋಗಬೇಕಾಗಿ ಬಂತು. ನಾನು ಯಾವುದೇ ನಾಯಿಯನ್ನು ಕೊಂದಿಲ್ಲ. ಹಾಗಾಗಿ ನಾನು ಕಾನೂನು ಕ್ರಮಕ್ಕೆ ಹೆದರುವುದಿಲ್ಲ. ಆದರೆ ಯಾವುದೇ ನಾಯಿ ದಾಳಿ ಮಾಡಿದರೆ, ಆತ್ಮರಕ್ಷಣೆಗಾಗಿ ನಾನು ಅದನ್ನು ಶೂಟ್ ಮಾಡಬೇಕಾಗುತ್ತದೆ  ಎಂದು ಹೇಳಿದರು.

ಮೊನ್ನೆ ಬೀದಿ ನಾಯಿಯೊಂದು ಮದರಸಾ ವಿದ್ಯಾರ್ಥಿಗೆ ಕಚ್ಚಿದ ಕಾರಣ ಇಲ್ಲಿನ ವಿದ್ಯಾರ್ಥಿಗಳು  ಮನೆಯಿಂದ ಹೊರಗೆ ಕಾಲಿಡಲು ಹೆದರುತ್ತಿದ್ದರು. ಹಾಗಾಗಿ ನಾನು ಅವರಿಗೆ ಭದ್ರತೆ ನೀಡಲು ಬಯಸಿದೆ. ನನ್ನ ಮಗ ಈ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂದು ಸಮೀರ್ ತಿಳಿಸಿದರು.



Join Whatsapp