ಸುಳ್ಯ | ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಜೊತೆ ಮಾತನಾಡಿದ್ದಕ್ಕೆ ವಿದ್ಯಾರ್ಥಿಗೆ ಕ್ರೂರವಾಗಿ ಥಳಿಸಿದ ABVP ಕಾರ್ಯಕರ್ತರು: 7 ಮಂದಿಯ ವಿರುದ್ಧ ಕೇಸ್ ದಾಖಲು

Prasthutha|

ಸುಳ್ಯ: ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ್ದಾನೆ ಎಂದು ಆರೋಪಿಸಿ ಅದೇ ತರಗತಿಯ ವಿದ್ಯಾರ್ಥಿಯೊಬ್ಬನ ಮೇಲೆ ಆರೆಸ್ಸೆಸ್ ನ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ಕಾರ್ಯಕರ್ತರು ಕ್ರೂರವಾಗಿ ಥಳಿಸಿರುವ ಘಟನೆ ಸುಳ್ಯ ತಾಲೂಕು ಕೊಡಿಯಾಲ್ ಬೈಲಿನಲ್ಲಿರುವ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.

- Advertisement -


ಹಲ್ಲೆಗೊಳಗಾದ ಮುಹಮ್ಮದ್ ಸನೀಫ್ (19) ಸುಳ್ಯ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಐಪಿಸಿ ಕಲಂ 143.147.148.323.324.506. ಹಾಗೂ 149 ಕಲಂಗಳಡಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಘಟನೆಯ ವಿವರ
ಮುಹಮ್ಮದ್ ಸನೀಫ್ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಕೊಡಿಯಾಲಬೈಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ. ಪದವಿಯಲ್ಲಿ ಓದುತ್ತಿದ್ದಾನೆ. ಅದೇ ಕಾಲೇಜಿನ ವಿದ್ಯಾರ್ಥಿನಿಯೊಂದಿಗೆ ಮಾತನಾಡುತ್ತಾನೆ ಎಂದು ಆರೋಪಿಸಿ ಆರೆಸ್ಸೆಸ್ ನ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಗೆ ಸೇರಿದ ವಿದ್ಯಾರ್ಥಿಗಳು ಆಗಸ್ಟ್ 30ರಂದು ಬೆಳಗ್ಗೆ 10:30 ಗಂಟೆಗೆ ಸುಮಾರಿಗೆ ಸನೀಫ್ ಕ್ಲಾಸ್ ರೂಂ ನಲ್ಲಿರುವಾಗ ಕ್ಲಾಸ್ ನುಗ್ಗಿ ಸನೀಫ್ ನೊಂದಿಗೆ “ಮಾತನಾಡಲಿಕ್ಕಿದೆ ಹೊರಗೆ ಬಾ” ಎಂದು ಕಾಲೇಜಿನ ಗ್ರೌಂಡ್ ಗೆ ಕರೆದುಕೊಂಡು ಹೋಗಿದ್ದಾರೆ.

- Advertisement -


ಅಲ್ಲಿ ಕಾಯುತ್ತಿದ್ದ ಅದೇ ಕಾಲೇಜಿನ ಇತರ ವಿದ್ಯಾರ್ಥಿಗಳಾದ ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿ ಪ್ರಜ್ವಲ್, ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ತನುಜ್, ದ್ವಿತಿಯ ವರ್ಷದ ಬಿಕಾಂ ವಿದ್ಯಾರ್ಥಿ ಅಕ್ಷಯ್, ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಮೋಕ್ಷಿತ್ ಹಾಗೂ ಸುಳ್ಯದ ಎನ್ ಎಂಸಿ ಕಾಲೇಜಿನ ಗೌತಮ್ ಮತ್ತು ಇತರರು ಸನೀಫ್ ಅವರ ಕಾಲರ್ ಪಟ್ಟಿ ಹಿಡಿದು ದೊಣ್ಣೆಯಿಂದ ಬೆನ್ನಿಗೆ ಕ್ರೂರವಾಗಿ ಹೊಡೆದು ನೆಲಕ್ಕೆ ದೂಡಿಹಾಕಿ ಕಾಲಿನಿಂದ ತುಳಿದಿದ್ದಾರೆ.


ಇನ್ನೂ ಮುಂದೆ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ತೀವ್ರ ಗಾಯಗೊಂಡ ಸನೀಫ್ ನಂತರ ತರಗತಿಗೆ ತೆರಳಿ ಅಲ್ಲಿಂದ ನೇರವಾಗಿ ಮನೆಗೆ ಹೋಗಿ ವಿಷಯ ತಿಳಿಸಿದ್ದಾರೆ. ಬಳಿಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.


ದೂರಿನ ಅನ್ವಯ ಆರೋಪಿಗಳಾದ ದೀಕ್ಷಿತ್, ಧನುಷ್, ಪ್ರಜ್ವಲ್, (ಅಂತಿಮ ವರ್ಷದ ಬಿಬಿಎ), ತನುಜ್ (ಅಂತಿಮ ವರ್ಷದ ಬಿಕಾಂ), ಅಕ್ಷಯ್ (ದ್ವಿತಿಯ ವರ್ಷದ ಬಿಕಾಂ), ಮೋಕ್ಷಿತ್ (ಅಂತಿಮ ವರ್ಷದ ಬಿಕಾಂ), ಗೌತಮ್ ( ಎನ್ ಎಂಸಿ ಕಾಲೇಜ್) ಹಾಗೂ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


ಮುಸ್ಲಿಮ್ ವಿದ್ಯಾರ್ಥಿಯ ಮೇಲೆ ಸಂಘಪರಿವಾರದ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರು ನಡೆಸಿದ ಹಲ್ಲೆಯನ್ನು ವಿವಿಧ ಸಂಘಟನೆಗಳು ಖಂಡಿಸಿವೆ.ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿವೆ.



Join Whatsapp