ಬೆಂಗಳೂರು: ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶುಕ್ರವಾರ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು. ದೂರದಾರ ವಕೀಲರಿಗೆ ಜಾಮೀನು ಅರ್ಜಿ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ನ್ಯಾಯಾಧೀಶರು ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿದರು.
ಹಿರಿಯ ವಕೀಲ ಸಿ. ವಿ. ನಾಗೇಶ್ ಅವರ ಜೊತೆ ನ್ಯಾಯಾಲಯಕ್ಕೆ ಆಗಮಿಸಿದ ಯಡಿಯೂರಪ್ಪ ಅವರು, ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಧೀಶ ಬಿ. ಜಯಂತಕುಮಾರ್, ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ದೂರುದಾರರ ಪರ ವಕೀಲರಿಗೆ ಸೂಚಿಸಿದ್ದಾರೆ.
ಜಾಮೀನು ಅರ್ಜಿಯನ್ನು ಪರಿಶೀಲಿಸಿದ ನಂತರ ಪ್ರತಿಕ್ರಿಯೆ ಸಲ್ಲಿಸಲಾಗುವುದು ಎಂದು ದೂರುದಾರರ ಪರ ವಕೀಲ ಕೆವಿ ಧನಂಜಯ್ ಅವರು ಕೋರ್ಟ್ ಗೆ ತಿಳಿಸಿದ್ದಾರೆ.
ಜಾಮೀನು ವಿರೋಧಿಸಲು ಕಾರಣಗಳಿದ್ದರೆ, ಆಕ್ಷೇಪಣೆ ಸಲ್ಲಿಸಲಾಗುವುದು. ಅದಕ್ಕಾಗಿ ಸಮಯ ನೀಡಿ ಎಂದು ಕೆ.ವಿ. ಧನಂಜಯ್ ಅವರು ಕೋರಿದರು. ನಂತರ ಪ್ರಕರಣದ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಲಾಯಿತು.