ನವದೆಹಲಿ: ಇತ್ತೀಚೆಗೆ ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ ಕಾರ್ಯಕ್ರಮ ಆಯೋಜಕರಾದ ಯತಿ ನರಸಿಂಹಾನಂದ್ ವಿರುದ್ಧ ದ್ವೇಷ ಭಾಷಣಕ್ಕಾಗಿ ಉತ್ತರಾಖಂಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಸಂಘಪರಿವಾರ ಮುಖಂಡರು ಮುಸ್ಲಿಮರ ವಿರುದ್ಧ ಹಿಂಸಾಚಾರ ಮತ್ತು ನರಮೇಧಕ್ಕೆ ಕರೆ ನೀಡಿದ್ದರು. ಈ ನಿಟ್ಟಿನಲ್ಲಿ ಆಯುಧ ತೆಗೆದುಕೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ನರಸಿಂಹಾನಂದ್ ಈ ಹಿಂದೆಯೂ ಕೂಡ ದ್ವೇಷ ಭಾಷಣಗಳ ಮೂಲಕ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪವಿದೆ. ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂಸಾಚಾರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಎಫ್.ಐ.ಆರ್ ದಾಖಲಿಸ್ಪಟ್ಟ ಐದನೇ ವ್ಯಕ್ತಿಯೇ ಯತಿ ನರಸಿಂಹಾನಂದ್.
ಹರಿದ್ವಾರ ಘಟನೆಗೆ ಸಂಬಂಧಿಸಿದಂತೆ ಈ ಹಿಂದೆ ಸಾಗರ್ ಸಿಂಧು ಮಹಾರಾಜ್, ಸಾಧ್ವಿ ಅನ್ನಪೂರ್ಣ, ಧರಮ್ ದಾಸ್, ಜಿತೇಂದ್ರ ತ್ಯಾಗಿ ಯಾನೆ ವಸೀಮ್ ರಿಝ್ವಿ ಎಂಬವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಟಿಎಂಸಿ ಮುಖಂಡ, ಆರ್.ಟಿ.ಐ. ಕಾರ್ಯಕರ್ತ ಸಾಕೇತ್ ಗೋಖಲೆ ಸಲ್ಲಿಸಿದ ದೂರಿನ ಆಧಾರದಲ್ಲಿ ಹಿಂದೂ ರಕ್ಷಣಾ ಸೇನೆಯ ಪ್ರಬೋಧಾನಂದ ಗಿರಿ, ಬಿಜೆಪಿ ನಾಯಕಿಯರಾದ ಉದಿತಾ ತ್ಯಾಗಿ, ಅಶ್ವಿನಿ ಉಪಾಧ್ಯಾಯ ದ್ವೇಷಪೂರಿತ ಭಾಷಣಕ್ಕಾಗಿ ಜಾಮೀನು ಪಡೆದಿದ್ದರು.
ಈ ಮಧ್ಯೆ ಕಾರ್ಯಕ್ರಮದ ಸಂಘಟಕ, ಭಾಷಣಕಾರ ಯತಿ ನರಸಿಂಹಾನಂದ್ ಯಾವುದೇ ತಪ್ಪು ಮಾಡಿಲ್ಲ ಎಂದು ಪಟ್ಟು ಹಿಡಿದಿದ್ದರು.