ಬೆಂಗಳೂರು : ಕೋವಿಡ್ ಸೋಂಕಿತರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ ಆರೋಪದಡಿ ನಗರದ ಖಾಸಗಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕನ ವಿರುದ್ಧ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಿ.ವಿ.ರಾಮನ್ ನಗರ ಆಸ್ಪತ್ರೆಯ ವೈದ್ಯಾಧಿಕಾರಿ ಶಿವೇಗೌಡ ನೀಡಿದ ದೂರಿನ ಮೇರೆಗೆ ಕಗ್ಗದಾಸಪುರದ ಕಂಫರ್ಟ್ ಮಲ್ಟಿ ಸೆಷ್ಪಾಲಿಟಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಜಾಕೆಲ್ವಿನ್ ಕ್ರಿಶ್ಚಿಯನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಂಫರ್ಟ್ ಮಲ್ಟಿ ಸೆಷ್ಪಾಲಿಟಿ ಆಸ್ಪತ್ರೆ ಆಡಳಿತ ಮಂಡಳಿಯು ಪಾಸಿಟಿವ್ ರೋಗಿಗಳಿಂದ ಜನರಲ್ ಬೆಡ್ ಗೆ 10 ಸಾವಿರ, ಹೆಚ್ ಡಿಯು ಬೆಡ್ ಗೆ 12 ಸಾವಿರ, ವೆಂಟಿಲೇಟರ್ ರಹಿತ ಐಸಿಯು ಬೆಡ್ಗೆ 15 ಹಾಗೂ ವೆಂಟಿಲೇಟರ್ ಸಹಿತ ಐಸಿಯು ಬೆಡ್ಗೆ 25 ಸಾವಿರ ರೂಪಾಯಿ ನಿಗದಿಪಡಿಸಿ ಹಣ ವಸೂಲಿ ಮಾಡಿತ್ತು ಎಂದು ತಿಳಿದು ಬಂದಿದೆ.
ರಾಜ್ಯ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ದರವನ್ನು ಆಸ್ಪತ್ರೆಯು ಸೋಂಕಿತರಿಂದ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ನಗರ ಪೂರ್ವ ವಿಭಾಗದ ಖಾಸಗಿ ಆಸ್ಪತ್ರೆಗಳ ಉಸ್ತುವಾರಿ ವಹಿಸಿಕೊಂಡಿರುವ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಹಾಗೂ ಐಎಎಸ್ ಅಧಿಕಾರಿ ಮಣಿವಣ್ಣನ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ಮಾಡಿತ್ತು.
ಆಸ್ಪತ್ರೆಯ ಆಡಳಿತ ಮಂಡಳಿಯವರು 81 ಮಂದಿ ರೋಗಿಗಳಿಂದ 65 ಲಕ್ಷ ರೂ. ಹೆಚ್ಚುವರಿಯಾಗಿ ಪಡೆದುಕೊಂಡಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸೋಂಕಿತರಿಗೆ ಹಣ ವಾಪಸ್ ನೀಡದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮೇ 29ರಂದು ನೋಟಿಸ್ ಜಾರಿ ಮಾಡಿದ್ದರು.
ನೋಟಿಸ್ ಜಾರಿ ಮಾಡಿದರೂ ಸೋಂಕಿತರಿಗೆ ಜಾಕ್ವೆಲಿನ್ ಹಣ ವಾಪಸ್ ನೀಡಿರಲಿಲ್ಲ. ಆರೋಗ್ಯ ಸರಿಯಿಲ್ಲ ಎಂದು ಸಂಪರ್ಕಕ್ಕೂ ಸಿಗದೆ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಪೊಲೀಸರು ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.