ಎಸಿಬಿ ವಿರುದ್ಧದ ಪ್ರಕರಣ: ವಿಚಾರಣೆ ಮುಂದೂಡುವಂತೆ ಕರ್ನಾಟಕ ಹೈಕೋರ್ಟ್ ಗೆ ಸುಪ್ರೀಂ ಕೋರ್ಟ್ ಸೂಚನೆ

Prasthutha|

ನವದೆಹಲಿ: ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ)  ವಿರುದ್ಧ ಹಲವಾರು ಆರೋಪಗಳನ್ನು ಮತ್ತು ನಿರ್ದೇಶನಗಳನ್ನು ನೀಡಿರುವ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿಗೆ ಪ್ರಕರಣದ ವಿಚಾರಣೆಯನ್ನು ಇನ್ನೂ ಮೂರು ದಿನಗಳ ಕಾಲ ಮುಂದೂಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮನವಿ ಮಾಡಿದೆ.

- Advertisement -

ಹಾಲಿ ನ್ಯಾಯಾಧೀಶರಿಂದ ಎಸಿಬಿ ಮುಖ್ಯಸ್ಥರ ವಿರುದ್ಧ ಆದೇಶ ಹೊರಡಿಸಿದ್ದಕ್ಕಾಗಿ ತಮಗೆ ವರ್ಗಾವಣೆಯ ಬೆದರಿಕೆ ಬಂದಿದೆ ಎಂದು ಆರೋಪಿಸಿರುವ ನ್ಯಾಯಮೂರ್ತಿ ಸಂದೇಶ್ ಅವರು ನೀಡಿದ ಆದೇಶವನ್ನು ಇನ್ನೂ ಅಪ್ಲೋಡ್ ಮಾಡದ ಕಾರಣ ಮುಖ್ಯ ನ್ಯಾಯಮೂರ್ತಿ ನೇತೃತ್ವದ ನ್ಯಾಯಪೀಠವು ಈ ಮನವಿಯನ್ನು ಮಾಡಿದೆ.

ತಮ್ಮ ಮತ್ತು ಎಸಿಬಿ ವಿರುದ್ಧ ನ್ಯಾ. ಎಚ್‌ ಪಿ ಸಂದೇಶ್‌ ಅವರು ಜುಲೈ 7ರ ಆದೇಶದಲ್ಲಿ ಮಾಡಿದ್ದ ಪ್ರತಿಕೂಲ ಅವಲೋಕನಗಳನ್ನು ಪ್ರಶ್ನಿಸಿ ಎಡಿಜಿಪಿ ಸಿಂಗ್ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

- Advertisement -

ಹೇಳಿಕೆಗಳನ್ನು ತಪ್ಪಿಸಬಹುದಿತ್ತು ಎಂದು ಎಡಿಜಿಪಿ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೆಲವು ದಿನಗಳ ಕಾಲ ಹೈಕೋರ್ಟ್‌ನ ವಿಚಾರಣೆಗೆ ತಡೆ ನೀಡುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಮಿತ್ ಕುಮಾರ್, “ನನ್ನ ಕಕ್ಷೀದಾರರ ಎಸಿಆರ್‌ಗಳನ್ನು ಮುಕ್ತ ನ್ಯಾಯಾಲಯದಲ್ಲಿ ಓದಲಾಗಿದೆ. ಅವರ ವಾದ ಆಲಿಸದೇ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸಲಾಗಿದೆ. ಅವರು ಹುದ್ದೆಗೆ ಅರ್ಹರಾಗಿದ್ದಾರೆಯೇ ಎಂದು ಪರಿಗಣಿಸಲು ಸಹ ನಿರ್ದೇಶಿಸಲಾಗಿದೆ” ಎಂದು ಅಲವತ್ತುಕೊಂಡರು.

ಈ ಹಂತದಲ್ಲಿ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು “ಜಾಮೀನು ಕೋರಿದ್ದ ಅರ್ಜಿದಾರರ ಕಥೆ ಏನಾಯಿತು? ಆರೋಪಿಯನ್ನು ನೀವು ಪಕ್ಷಕಕಾರನ್ನಾಗಿ ಮಾಡಿದ್ದು ಏಕೆ? ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರನ್ನು ಪಕ್ಷಕಾರರನ್ನಾಗಿ ಮಾಡಬೇಕಿತ್ತು” ಎಂದು ತಿಳಿಸಿದರು.

ಅಂತಿಮವಾಗಿ ನ್ಯಾಯಾಲಯ “ಪ್ರಕರಣವನ್ನು ಸುಪ್ರೀಂಕೋರ್ಟ್‌ನಲ್ಲಿ ಇಂದಿಗೆ ಪಟ್ಟಿ ಮಾಡಿದ್ದರೂ ಕೂಡ ನ್ಯಾಯಮೂರ್ತಿಗಳು (ನ್ಯಾ ಸಂದೇಶ್‌) ನಾಳೆ ವಿಚಾರಣೆಗೆ ನಿರ್ದೇಶಿಸಿದ್ದು ಕೆಲವು ಮೌಖಿಕ ಆದೇಶಗಳನ್ನು ನೀಡಿದ್ದಾರೆ. ಇದನ್ನು ಪರಿಗಣಿಸಿ 3 ದಿನಗಳ ಕಾಲ ವಿಚಾರಣೆಯನ್ನು ಮುಂದೂಡುವಂತೆ ಕೋರುವುದು ಸೂಕ್ತವೆಂದು ನಾವು ಭಾವಿಸುತ್ತೇವೆ” ಎಂದರು. ಹೀಗಾಗಿ ಪ್ರಕರಣವನ್ನು ಜುಲೈ 14ರ ಗುರುವಾರಕ್ಕೆ ಮುಂದೂಡಲಾಯಿತು.

Join Whatsapp