ದುಬೈ: ದುಬೈ ಎಂಬ ಮಾಯಾನಗರಿಯಲ್ಲಿ ಸಾವಿರಾರು ಜನರ ಅದೃಷ್ಟ ರಾತ್ರಿ ಬೆಳಗಾಗುವುದರೊಳಗೆ ಬದಲಾಗುವುದನ್ನು ನಾವು ಸಾಕಷ್ಟ ಕೇಳಿದ್ದೇವೆ. ಆ ನಗರಕ್ಕೆ ಆ ಒಂದು ಮಾಂತ್ರಿಕ ಶಕ್ತಿಯಿದೆ. ಇದೀಗ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಕಾರು ಚಾಲಕನೊಬ್ಬ ಒಂದೇ ದಿನದಲ್ಲಿ ಬರೋಬ್ಬರಿ ನೂರು ಕೋಟಿ ರೂಪಾಯಿಗಳ ಒಡೆಯನಾಗಿದ್ದಾನೆ.
ದುಬೈನ ಪ್ರಮುಖ ಆನ್’ ಲೈನ್ ಲಾಟರಿಗಳಲ್ಲಿ ಒಂದಾದ ಮಹಝೂಝ್ ’ನ ಈ ವಾರದ ಅದೃಷ್ಟ ವಿಜೇತರ ಘೋಷಣೆಯಾಗಿದ್ದು, ದುಬೈನಲ್ಲಿ ಕಾರು ಚಾಲಕನಾಗಿರುವ, ಪಾಕಿಸ್ತಾನ ಮೂಲದ 36 ವರ್ಷದ ಜುನೈದ್ ರಾಣಾ, ಗ್ರ್ಯಾಂಡ್ ಫ್ರೈಝ್ ಆದ 50 ಮಿಲಿಯನ್ ದಿರ್ಹಂ ಅಂದರೆ ನೂರು ಕೋಟಿ ರೂಪಾಯಿ ಬಹುಮಾನವನ್ನು ಗೆದ್ದಿದ್ದಾನೆ.
ಮಹಝೂಝ್ ಲಾಟರಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಗ್ರ್ಯಾಂಡ್ ಪ್ರೈಝ್ ವಿಜೇತರನ್ನು ಕಂಡಿದೆ. ಜುನೈದ್ ರಾಣಾ ಆಯ್ಕೆ ಮಾಡಿದ್ದ 6,11, 21,32,33, 46 ಅಂಕಿಗಳಿಗೆ ಅದೃಷ್ಟ ಒಲಿದಿದೆ. ಮಹಝೂಝ್ ಲಾಟರಿಯಲ್ಲಿ ಇದುವರೆಗೂ 48 ಡ್ರಾಗಳು ನಡೆದಿದ್ದರೂ, ಆರೂ ಅಂಕಿಗಳು ತಾಳೆಯಾಗುವ ಗ್ರ್ಯಾಂಡ್ ಫ್ರೈಝ್ ವಿಜೇತರನ್ನು ಕಂಡಿರಲಿಲ್ಲ. ಮಹಝೂಝ್ ವೆಬ್’ ಸೈಟ್’ ಗೆ ಭೇಟಿ ಕೊಟ್ಟು 35 ದಿರ್ಹಂ ಬೆಲೆಯ ನೀರಿನ ಬಾಟಲ್ ಖರೀದಿಸಿದ್ದ ಜುನೈದ್ ರಾಣಾ ಬಳಿಕ ತನ್ನ ಜೀವನವನ್ನೇ ಬದಲಾಯಿಸುವ ಆರು ಅಂಕಿಗಳನ್ನು ಆಯ್ಕೆ ಮಾಡಿದ್ದರು.
ಪ್ರತೀ ಶನಿವಾರ ಮಹಝೂಝ್ ಲಾಟರಿಯ ಡ್ರಾ ಕಾರ್ಯಕ್ರಮವನ್ನು ಸಂಸ್ಥೆಯ ವೆಬ್’ ಸೈಟ್’ ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ವೆಬ್ ’ಸೈಟ್’ ನಲ್ಲಿ ತೋರಿಸಲಾಗಿರುವ ಉತ್ಪನ್ನಗಳನ್ನು ಆಯ್ಕೆ ಮಾಡಿ ಮೊತ್ತವನ್ನು ಪಾವತಿಸಿದ ಬಳಿಕ 1 ರಿಂದ 49ರ ಒಳಗಿನ ಆರು ಸಂಖ್ಯೆಗಳನ್ನು ಆಯ್ಕೆ ಮಾಡುವ ಅವಕಾಶ ನಿಮಗೆ ದೊರೆಯಲಿದೆ. ನೀವು ಆಯ್ಕೆ ಮಾಡಿದ ಉತ್ಪನ್ನಗಳ ಮೊತ್ತವನ್ನು ಮಹಝೂಝ್ ಸಂಸ್ಥೆಯು ಚಾರಿಟಿ ಕೆಲಸಗಳಿಗಾಗಿ ವಿನಿಯೋಗಿಸುತ್ತಾರೆ.
ದುಬೈನಲ್ಲಿ ಕಾರು ಚಾಲಕನಾಗಿರುವ ಜುನೈದ್ ರಾಣಾ ಮಾಸಿಕ 6000 ದಿರ್ಹಂ ಸಂಪಾದನೆ ಮಾಡುತ್ತಿದ್ದಾರೆ. ಲಾಟರಿ ಡ್ರಾದ ನೇರಪ್ರಸಾರದ ವೇಳೆ ಇಬ್ಬರು ಸೆಕ್ಯೂರಿಟಿ ಗಾರ್ಡ್’ಗಳ ಜೊತೆ ರಾಣಾ ಹರಟೆ ಹೊಡೆಯುತ್ತಿದ್ದರು. ಸ್ವಲ್ಪ ಸಮಯದ ಬಳಿಕ ವಿಜೇತ ನಂಬರ್’ ನೋಡಿ ತಾನು ಆಯ್ಕೆ ಮಾಡಿದ್ದ ನಂಬರ್’ ಅನ್ನು ಪರಿಶೀಲಿಸಿದಾಗ 100 ಕೋಟಿಯ ಒಡೆಯನಾದ ವಿಷಯ ತಿಳಿದಿದೆ.
ಇದೀಗ 50 ಮಿಲಿಯನ್ ದಿರ್ಹಂ ವಿಜೇತನಾದ ಚೆಕ್ ಅನ್ನು ರಾಣಾ ಪಡೆದುಕೊಂಡಿದ್ದಾರೆ. ತಾನು ಇಷ್ಟು ದಿನ ಮಾಡುತ್ತಿದ್ದ ಚಾಲಕ ವೃತ್ತಿಯನ್ನು ಮುಂದುವರಿಸಲಿದ್ದೇನೆ, ಸೂಪರ್ ಕಾರ್ ’ಗಳನ್ನು ಕೊಳ್ಳುವ ಕನಸು ನನಗಿಲ್ಲ ಎಂದು ರಾಣಾ ನಗುಮೊದಿಂದಲೇ ಪ್ರತಿಕ್ರಿಯಿಸಿದ್ದಾರೆ.