ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಬಲಿಯಾಗಿದ್ದು, ರಸ್ತೆ ಗುಂಡಿ ತಪ್ಪಿಸಲು ಹೋಗಿ ಕಾರು ಪಲ್ಟಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಯಲಹಂಕದ ಅಟ್ಟೂರು ಬಡಾವಣೆಯಲ್ಲಿ ನಡೆದಿದೆ.
ಜಕ್ಕೂರು ಸಮೀಪದ ಸ್ವಾಮಿ ವಿವೇಕನಂದ ಶಾಲೆ ಬಳಿ ನಡೆದ ಅಪಘಾತದಲ್ಲಿ ಕೇರಳ ಮೂಲದ ಯುವಕ ಅರ್ಷದ್ (24) ಸಾವನ್ನಪ್ಪಿದ್ದಾನೆ.
ಬೈಕ್‌ನಲ್ಲಿ ತೆರಳುತ್ತಿದ್ದ ಅರ್ಷದ್ ಭಾರೀ ಗಾತ್ರದ ರಸ್ತೆಗುಂಡಿ ಕಂಡು ತಕ್ಷಣ ಬ್ರೇಕ್ ಹಾಕಿದ ಕಾರಣ ಬೈಕ್ ಸ್ಕಿಡ್ ಆಗಿದೆ. ಇದೇ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಅರ್ಷದ್ ತಲೆಗೆ ಗಂಭೀರವಾದ ಗಾಯವಾಗಿತ್ತು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಬೈಕ್ ಸವಾರನನ್ನು ತಪ್ಪಿಸಲು ಹೋಗಿ ತಾನೂ ಆಳವಾದ ಗುಂಡಿಗೆ ಬಿದ್ದು ಕಾರು ಪಲ್ಟಿಯಾಗಿದೆ. ಅಪಘಾತದ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬೈಕ್‌ನಲ್ಲಿದ್ದ ಮತ್ತೊಬ್ಬರಿಗೆ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಚಾಲಕನನ್ನು ವಶಕ್ಕೆ ಪಡೆದು ಸಂಚಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, 40% ಕಮಿಷನ್ ಸರ್ಕಾರದ ರಸ್ತೆ ಗುಂಡಿಗೆ ಒಂದೇ ತಿಂಗಳಲ್ಲಿ ಮೂರನೇ ಬಲಿಯಾಗಿದೆ.
ನಿರಂತರ ಸಾವುಗಳಾದರೂ, ಹೈಕೋರ್ಟ್ ಪದೇ ಪದೇ ಚಾಟಿ ಬೀಸಿದರೂ ಎಚ್ಚರಾಗದ ಈ ಸರ್ಕಾರದ್ದು ಎಮ್ಮೆಗಿಂತಲೂ ದಪ್ಪ ಚರ್ಮ ಎಂದು ಟೀಕಿಸಿದೆ.
ಸಿಎಂ, ಸಚಿವರುಗಳು ಮೈಕ್ ಮುಂದೆ ನಿಂತು ಗಂಡಸ್ತನ, ದಮ್ಮು, ತಾಕತ್ತುಗಳ ಮಾತುಗಳಲ್ಲಿ ತೋರುವ ಪೌರುಷ ಆಡಳಿತದಲ್ಲಿ ಇಲ್ಲದಾಗಿರುವುದೇಕೆ ಎಂದು ಪ್ರಶ್ನಿಸಿದೆ.