►‘ಪ್ರತಿಪಕ್ಷಗಳ ಪ್ರತಿಭಟನೆ ದುರುದ್ದೇಶಪೂರ್ವಕ’
ನವದೆಹಲಿ: ಈ ಬಾರಿಯ ಬಜೆಟ್ ನಲ್ಲಿ ಯಾವುದೇ ರಾಜ್ಯವನ್ನು ಕಡೆಗಣಿಸಿಲ್ಲ. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಉದ್ದೇಶಪೂರ್ವಕವಾಗಿ ನಾಗರಿಕರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಾಜ್ಯಗಳ ನಡುವೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಬಜೆಟ್ ನಲ್ಲಿ ಈ ದೇಶದ ಪ್ರತಿಯೊಂದು ರಾಜ್ಯವನ್ನು ಹೆಸರಿಸಲು ಅವಕಾಶ ಸಿಗುವುದಿಲ್ಲ. ಈ ಪ್ರತಿಭಟನೆ ದುರುದ್ದೇಶದಿಂದ ಕೂಡಿದೆ ಎಂದರು.
ಇದಕ್ಕೆ ಉದಾಹರಣೆ ನೀಡಿ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಂಧವನ್ ಎಂಬ ಪಟ್ಟಣದಲ್ಲಿ ಬಂದರು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಆದರೆ ಮಂಗಳವಾರದ ತನ್ನ ಬಜೆಟ್ ಭಾಷಣದಲ್ಲಿ ರಾಜ್ಯದ ಹೆಸರನ್ನು ಉಲ್ಲೇಖಿಸಿಲ್ಲ. ಇದರರ್ಥ ಮಹಾರಾಷ್ಟ್ರವನ್ನು ಕಡೆಗಣಿಸಲಾಗಿದೆ ಎಂದರ್ಥವೇ ಎಂದು ಪ್ರಶ್ನಿಸಿದರು.