ಲಕ್ನೊ : ಗೋಶಾಲೆಯನ್ನು ಸ್ವಚ್ಛಗೊಳಿಸಿ, ಅಲ್ಲೇ ಮಲಗಿದರೆ ಕ್ಯಾನ್ಸರ್ ರೋಗ ಗುಣಪಡಿಸಬಹುದು ಎಂದು ಉತ್ತರ ಪ್ರದೇಶದ ಸಚಿವ ಸಂಜಯ್ ಸಿಂಗ್ ಗಂಗ್ವಾರ್ ಹೇಳಿಕೆ ನೀಡಿದ್ದಾರೆ.
ನೌಗಾವ ಪಕಾಡಿಯಾದಲ್ಲಿ ₹55 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಕನ್ಹಾ ಗೋಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಹಸುಗಳ ಸೇವೆ ಮಾಡುವುದರಿಂದ ರಕ್ತದೊತ್ತಡವನ್ನೂ ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ.
‘ಅಧಿಕ ರಕ್ತದೊತ್ತಡದ ರೋಗಿಗಳಿದ್ದರೆ ಕೇಳಿ. ಇಲ್ಲಿ ಹಸುಗಳಿವೆ. ನೀವು ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಹಸುಗಳ ಸೇವೆ ಮಾಡುವುದರಿಂದ ಔಷಧವನ್ನು ಅರ್ಧ ಪ್ರಮಾಣಕ್ಕೆ ಇಳಿಸಬಹುದು. ಒಬ್ಬ ವ್ಯಕ್ತಿ ರಕ್ತದೊತ್ತಡಕ್ಕೆ ಔಷಧಿಯಾಗಿ 20 ಮಿ.ಗ್ರಾಂ ಡೋಸ್ ತೆಗೆದುಕೊಳ್ಳುತ್ತಿದ್ದರೆ. ಹಸುಗಳ ಸೇವೆಯಿಂದ 10 ದಿನಗಳಲ್ಲಿ 10 ಮಿ.ಗ್ರಾಂಗೆ ಔಷಧಿ ಪ್ರಮಾಣ ಇಳಿಯುತ್ತದೆ‘ ಎಂದು ಹೇಳಿದ್ದಾರೆ.