ಬೆಂಗಳೂರು: ಬಿಜೆಪಿ ಸರಕಾರದ ಅವಧಿಯಲ್ಲಿ ಗುತ್ತಿಗೆದಾರರ ಬಿಲ್ ಬಾಕಿಯಾಗಿದೆ. ಈಗ ನೀವು ಒಮ್ಮೆಲೇ ಎಲ್ಲ ಬಾಕಿ ಚುಕ್ತಾ ಮಾಡಿ ಅಂದ್ರೆ, ಏನ್ ನೋಟ್ ಪ್ರಿಂಟ್ ಮಾಡಲಾ? ಎಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದ ಘಟನೆ ನಡೆದಿದೆ.
ಗುತ್ತಿಗೆದಾರರ ಸಂಘ ಅರಮನೆ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ನೀಡುವುದಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಇಬ್ಬರೂ ಬಜೆಟ್‌ನಲ್ಲೇ ಘೋಷಿಸಿದ್ದರು. ಆದರೆ ಇವತ್ತಿನವರೆಗೂ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ಕೇಂದ್ರ ಸರಕಾರ ಎಷ್ಟೇ ಅಸಹಕಾರ ಕೊಟ್ಟರೂ ಗುತ್ತಿಗೆದಾರರ ಅಷ್ಟೂ ಹಣವನ್ನು ನಾವೇ ಹಂತಹಂತವಾಗಿ ಪಾವತಿಸುತ್ತೇವೆ ಎಂದು ಸಿಎಂ ಪರಿಸ್ಥಿತಿ ವಿವರಿಸಿದರು.