ಪ್ರತಿಭಟನೆ ನೆಪದಲ್ಲಿ ರೈತರು ರಸ್ತೆ ತಡೆ ನಡೆಸುವುದನ್ನು ಸಹಿಸಲು ಸಾಧ್ಯವಿಲ್ಲ: ಸುಪ್ರೀಮ್ ಕೋರ್ಟ್

Prasthutha|

ನವದೆಹಲಿ: ರೈತರ ಪ್ರತಿಭಟನೆಯ ಭಾಗವಾಗಿ ರಸ್ತೆ ತಡೆ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಮ್ ಕೋರ್ಟ್ , ಇಂದು ರೈತರ ನಡೆಯನ್ನು ಟೀಕಿಸಿದೆ.

- Advertisement -

ಕೇಂದ್ರ ಸರ್ಕಾರ ಜಾರಿಗೊಳಿಸಿದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯು ವಿಚಾರಣಾ ಹಂತದಲ್ಲಿರುವಾಗ ರೈತರು ರಸ್ತೆ ತಡೆ ನಡೆಸಿ ಪ್ರತಿಭಟಿಸುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಬೇಕೆಂದು ಕಿಸಾನ್ ಮಹಾ ಪಂಚಾಯತ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಮ್ ಕೋರ್ಟ್, ಪ್ರತಿಭಟನೆ ನಡೆಸಬಹುದೇ ಹೊರತು ರಸ್ತೆ ತಡೆ ನಡೆಸುವುದು ಸೂಕ್ತವಲ್ಲ ಎಂದು ತಿಳಿಸಿದೆ. ಮಾತ್ರವಲ್ಲ ಈ ಅರ್ಜಿಯನ್ನು ಮರುಪರಿಶೀಲನೆ ನಡೆಸುವುದಾಗಿ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ದ್ವಿಸದಸ್ಯ ಪೀಠ ಮೌಖಿಕವಾಗಿ ಆದೇಶಿಸಿತ್ತು.

- Advertisement -

ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿ ಹೆದ್ದಾರಿಯನ್ನು ತಡೆದಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಕೋರಿ ನೋಯ್ಡಾ ನಿವಾಸಿ ಸುಪ್ರೀಮ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಪ್ರಸಕ್ತ ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶರಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ.ಎಂ ಸುಂದ್ರೇಶ್ ಅವರನ್ನೊಳಗೊಂಡ ಪೀಠ ಪರಿಗಣಿಸಿದ್ದು, ಈ ಸಂಬಂಧ 43 ರೈತ ಸಂಘಟನೆಗಳಿಗೆ ನೋಟಿಸ್ ನೀಡಿದೆ.

ರೈತರ ಪರ ಹಿರಿಯ ವಕೀಲ ದುಷ್ಯಂತ್ ದವೆ ಸುಪ್ರೀಮ್ ಕೋರ್ಟ್ ನಲ್ಲಿ ವಾದಿಸಿ ರೈತರು ರಸ್ತೆಗಳನ್ನು ತಡೆದಿಲ್ಲ ಬದಲಾಗಿ ದೆಹಲಿ ಪೊಲೀಸರು ಈ ನಡೆಯನ್ನು ಪ್ರದರ್ಶಿಸಿದ್ದಾರೆ ಎಂದು ಉಲ್ಲೇಖಿಸಿದರು.

ರೈತರ ಪರ ವಕೀಲರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶ ಕೌಲ್ ‘ ರೈತರು ಆಂದೋಲನದ ಹಕ್ಕನ್ನು ಹೊಂದಿರಬಹುದು ಆದರೆ ರಸ್ತೆಗಳನ್ನು ನಿರ್ಬಂಧಿಸುವುದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.



Join Whatsapp