ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣವನ್ನು ಸಮಗ್ರ ತನಿಖೆ ನಡೆಸಿ : ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

Prasthutha|

ಮಂಗಳೂರು : ಕೊಲಾಸೋ ಕಾಲೇಜಿನಲ್ಲಿ ಕಾಲೇಜು ಶುಲ್ಕ ಪಾವತಿಗೆ ಕಿರುಕುಳ ನೀಡಿದ ಕಾರಣದಿಂದ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿದ್ದು, ಪ್ರಕರಣವನ್ನು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾ ಸಮಿತಿಯು ಕಾಲೇಜು ಮುಂಭಾಗ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಲಾಯಿತು.

- Advertisement -

ಕ್ಯಾಂಪಸ್ ಫ್ರಂಟ್ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ ಮಾತನಾಡಿ ಇದು ವಿದ್ಯಾರ್ಥಿನಿಯ ಆತ್ಮಹತ್ಯೆಯಲ್ಲ ಇದು ಆಡಳಿತ ಮಂಡಲಿ ನಡೆಸಿದ ಕೊಲೆಯಾಗಿದೆ, ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು , ತಪ್ಪಿತಸ್ಥರಿಗೆ ಕಾನೂನು ಕ್ರಮ ಜರುಗಿಸಬೇಕೆಂದು ಹಾಗೂ ಖಾಸಗಿ ಕಾಲೇಜುಗಳಲ್ಲಿ ನಡೆಯುತ್ತಿರುವ ಶುಲ್ಕ ಒತ್ತಡಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.
ಕಾಲೇಜು ಶುಲ್ಕ ಪಾವತಿಗೆ ಟಾರ್ಚರ್‌ ನೀಡಿದ ಹಿನ್ನೆಲೆಯಲ್ಲಿ ಬಿಎಸ್ಸಿ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಕದ್ರಿಯಲ್ಲಿರುವ ಕೊಲಾಸೋ ನರ್ಸಿಂಗ್‌ ಕಾಲೇಜಿನ ಹಾಸ್ಟೆಲ್‌ನಲ್ಲಿ ನಡೆದಿದ್ದು, ನೀನಾ ಸತೀಶ್‌ ( 19 ವರ್ಷ) ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ಕಾಸರಗೋಡು ಮೂಲದ ನೀನಾ ಸತೀಶ್‌ ನಗರದ ಕೊಲಾಸೋ ನರ್ಸಿಂಗ್‌ ಕಾಲೇಜಿನಲ್ಲಿ ಪ್ರಥಮ ಬಿಎಸ್ಸಿ ನರ್ಸಿಂಗ್‌ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು. ಮೊನ್ನೆಯ ದಿನ (5/10/2021) ಕದ್ರಿಯಲ್ಲಿರುವ ಕಾಲೇಜಿನ ಹಾಸ್ಟೇಲ್‌ನ ಶೌಚಾಲಯದಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ನೀನಾ ಸತೀಶ್‌ ಬರೆದಿಟ್ಟಿರುವ ಡೆತ್‌ ನೋಟ್‌ ಪತ್ತೆಯಾಗಿದೆ. ನೀನಾ ಸತೀಶ್‌ ಪ್ರಥಮ ಬಿಸ್ಸಿ ನರ್ಸಿಂಗ್‌ ವಿದ್ಯಾಭ್ಯಾಸವನ್ನು ಪಡೆಯುವ ಸಲುವಾಗಿ ಸುಮಾರು 75 ಸಾವಿರ ರೂಪಾಯಿ ಫೀಸ್‌ ಪಾವತಿ ಮಾಡಿದ್ದಾರೆ. ಉಳಿದ ಹಣವನ್ನು ಪಾವತಿ ಮಾಡುವಂತೆ ಕಾಲೇಜಿನ ಆಡಳಿತ ಮಂಡಳಿ ಕೇಳುತ್ತಿದ್ದಾರೆ. ಉಳಿದ ಹಣ ಪಾವತಿ ಮಾಡದೇ ಇದ್ರೆ ಯೂನಿಫಾರ್ಮ ನೀಡುವುದಿಲ್ಲ ಎಂದು ತಿಳಿಸಿದ್ದರು. ಇದೇ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ. ದ.ಕ ಜಿಲ್ಲೆಯಲ್ಲಿ ನಿರಂತರವಾಗಿ ಕಾಲೇಜು ಶುಲ್ಕದ ವಿಚಾರದಲ್ಲಿ ಖಾಸಗಿ ಕಾಲೇಜುಗಳು ಮಾನಸಿಕ ಕಿರುಕುಳ ನೀಡುತ್ತಿದ್ದು ಈ ಘಟನೆಯು ಮುಂದುವರಿದ ಭಾಗವಾಗಿದೆ. ದ.ಕ ಜಿಲ್ಲಾಡಳಿತದಿಂದ ಈ ಮೊದಲು ಕಾಲೇಜು ಶುಲ್ಕದ ವಿಚಾರದಲ್ಲಿ ಒತ್ತಡ ಹೇರಬಾರದೆಂದು ಆದೇಶ ಹೊರಡಿಸಿದರೂ , ಆದೇಶವನ್ನು ಪಾಲಿಸದೆ ನಿರಂತರವಾಗಿ ವಿವಿಧ ಕಾಲೇಜುಗಳಲ್ಲಿ ಕಿರುಕುಳ ನೀಡುತ್ತಿದ್ದು ಇದನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ಆತ್ಮಹತ್ಯೆಗೆ ಕಾರಣಕರ್ತರಾದವರನ್ನು ಶೀಘ್ರ ಬಂಧಿಸಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಜಿಲ್ಲಾ ಮುಖಂಡರಾದ ಸಿರಾಜ್ ಮಂಗಳೂರು, ಅರ್ಫಿದ್ ಅಡ್ಕಾರ್, ಹಫೀಝ್, ಅಶ್ರಫ್ ಪೊರ್ಕೊಡಿ, ಮುನೀರ್ ಬಾಜಾಲ್, ಸರಫುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.

- Advertisement -

ಬೇಡಿಕೆಗಳು :
1) ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು.

2) ವಿದ್ಯಾರ್ಥಿನಿಯ ಕುಟುಂಬಕ್ಕೆ ಸರಕಾರ ಹಾಗೂ ಕಾಲೇಜು ಆಡಳಿತ ಮಂಡಳಿ ಪರಿಹಾರ ಮೊತ್ತ ಒದಗಿಸಬೇಕು.

3) ಜಿಲ್ಲೆಯ ಖಾಸಗಿ ಕಾಲೇಜುಗಳಲ್ಲಿ ನಡೆಯುತ್ತಿರುವ ಕಾಲೇಜು ಶುಲ್ಕ ಒತ್ತಡಕ್ಕೆ ಕಡಿವಾಣ ಹಾಕಬೇಕು.

Join Whatsapp