ಸರ್ಕಾರಿ ಮೆಡಿಕಲ್ ಕಾಲೇಜಿಗೆ ಮೀಸಲಿದ್ದ ಜಾಗ ಸೀ ಫುಡ್ ಪಾರ್ಕ್ ಗೆ | ಕ್ಯಾಂಪಸ್ ಫ್ರಂಟ್ ಪ್ರತಿಭಟನೆ; ಪೊಲೀಸರೊಂದಿಗೆ ಘರ್ಷಣೆ, ಮಾತಿನ ಚಕಮಕಿ

Prasthutha: November 26, 2020

ಪುತ್ತೂರು : ಸರಕಾರಿ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟಿದ್ದ ಜಾಗವನ್ನು ಸೀ ಫುಡ್ ಪಾರ್ಕ್ ನಿರ್ಮಾಣಕ್ಕೆ ಬಳಸಿಕೊಳ್ಳುತ್ತಿರುವುದನ್ನು ಇಂದು ಕ್ಯಾಂಪಸ್ ಫ್ರಂಟ್ ಪುತ್ತೂರು ಘಟಕ ಪ್ರತಿಭಟನೆ ನಡೆಸಿದೆ. ಆದರೆ, ಈ ವೇಳೆ ಪೊಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡುವೆ, ಮಾತಿನ ಚಕಮಕಿ ನಡೆದ ಘಟನೆಯೂ ವರದಿಯಾಗಿದೆ.

ವಿದ್ಯಾರ್ಥಿ ಸಂಘಟನೆ ಕ್ಯಾಂಪಸ್ ಫ್ರಂಟ್ ವತಿಯಿಂದ ‘ಎಂಎಲ್ ಎ ಆಫೀಸ್ ಮಾರ್ಚ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಪ್ರತಿಬಾರಿ ಈ ಪ್ರತಿಭಟನೆಗೆ ಅನುಮತಿ ನಿರಾಕರಿಸುತ್ತಾ ಬಂದಿದ್ದ ಪೊಲೀಸರು, ಈ ಬಾರಿಯೂ ಅನುಮತಿ ವಿಚಾರದಲ್ಲಿ ಘರ್ಷಣೆ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಫಯಾಜ್ ದೊಡ್ಡಮನೆ ಅವರ ಮೈಮೇಲೆ ಕೈಹಾಕಿ ತಳ್ಳಿದ ಘಟನೆ ನಡೆದಿದೆ. ಇದರ ಪರಿಣಾಮವಾಗಿ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆದಿದೆ.

 “ಕಳೆದ ಸರಕಾರದಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆಂದು 50 ಎಕರೆ ಭೂಮಿಯನ್ನು ಪುತ್ತೂರಿನ ಬನ್ನೂರಿನಲ್ಲಿ ಮೀಸಲಿರಿಸಿತ್ತು. ಆದರೆ, ಈ ಸರಕಾರದಲ್ಲಿ ಶಾಸಕ ಸಂಜೀವ ಮಠಂದೂರು ಅವರ ಪ್ರಭಾವ ಬಳಸಿಕೊಮಡು ಆ ಜಾಗವನ್ನು ಖಾಸಗಿ ಸಹಭಾಗಿತ್ವದ ಸೀ ಫುಡ್ ಪಾರ್ಕ್ ಗೆ ನೀಡಲಾಗುತ್ತಿದೆ’’ ಎಂದು ಕ್ಯಾಂಪಸ್ ಫ್ರಂಟ್ ಪುತ್ತೂರು ಅಧ್ಯಕ್ಷ ರಿಯಾಝ್ ಅಂಕತ್ತಡ್ಕ ಆಪಾದಿಸಿದ್ದಾರೆ.

ಮಂಗಳೂರಿನಲ್ಲಿ ಏಳು ಮೆಡಿಕಲ್ ಕಾಲೇಜುಗಳಿವೆ, ಹೀಗಾಗಿ ಇಲ್ಲಿಗೆ ಸರಕಾರಿ ಮೆಡಿಕಲ್ ಕಾಲೇಜಿನ ಅಗತ್ಯವಿಲ್ಲ ಎಂಬ ಉತ್ತರ ಜನಪ್ರತಿನಿಧಿಗಳಿಂದ ಬರುತ್ತದೆ. ಪುತ್ತೂರಿನಿಂದ ಮಂಗಳೂರಿಗೆ ತುಂಬಾ ದೂರ ಇದೆ. ಬಡವರಿಗೆ ಇಲ್ಲಿ ಸರಕಾರಿ ಮೆಡಿಕಲ್ ಕಾಲೇಜಿನ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಂಬಂಧ ಪ್ರತಿಭಟನೆಗೆ ನಮ್ಮ ಸಂಘಟನೆಗೆ ಪ್ರತಿಬಾರಿಯೂ ನಿರಾಕರಿಸಲಾಗುತ್ತಿದೆ. ಕಳೆದ ವಾರ ಬೇರೆ ಸಂಘಟನೆಗೆ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಆದರೆ, ಶಾಸಕರ ಕುಮ್ಮಕ್ಕಿನಿಂದ ನಮ್ಮ ಸಂಘಟನೆಗೆ ಪ್ರತಿಭಟನೆ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ರಿಯಾಝ್ ಆಪಾದಿಸಿದ್ದಾರೆ.

ಪ್ರತಿಭಟನೆಯ ವೇಳೆ ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರನ್ನು ಮೈಗೆ ಕೈಹಾಕಿ ತಳ್ಳಲಾಗಿದೆ. ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಈ ಸಂಬಂಧ ಸ್ಥಳೀಯ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾವು ಈಗ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಭೇಟಿಯಾಗಲು ತೆರಳುತ್ತಿದ್ದೇವೆ ಎಂದು ರಿಯಾಝ್ ‘ಪ್ರಸ್ತುತ’ಕ್ಕೆ ಮಾಹಿತಿ ನೀಡಿದ್ದಾರೆ.  

ಪ್ರತಿಭಟನೆಯಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಫಯಾಜ್ ದೊಡ್ಡಮನೆ, ಜಿಲ್ಲಾ ಮುಖಂಡ ಸವಾದ್ ಕಲ್ಲರ್ಪೆ, ಜಿಲ್ಲಾ ಕಾರ್ಯದರ್ಶಿ ಅನ್ಸಾರ್ ಬೆಳ್ಳಾರೆ, ಜಿಲ್ಲಾ ಸದಸ್ಯ ಆಫ್ರಿದ್, ಶಬೀರ್ ಮುಂತಾದವರು ಉಪಸ್ಥಿತರಿದ್ದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!