►ಜುಲೈ 25 ಕ್ಕೆ ಗಂಗಾವತಿಯಲ್ಲಿ ಉದ್ಘಾಟನಾ ಸಮಾರಂಭ
ಬೆಂಗಳೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕದ 2022-23 ನೇ ಸಾಲಿನ ಸದಸ್ಯತ್ವ ಅಭಿಯಾನವು ಜುಲೈ 25 ರಿಂದ ಪ್ರಾರಂಭಗೊಳ್ಳಲಿದೆ ಹಾಗೂ ರಾಜ್ಯ ಉದ್ಘಾಟನಾ ಸಮಾರಂಭವು ಜುಲೈ 25 ರಂದು ಗಂಗಾವತಿಯಲ್ಲಿ ನಡೆಸಲಾಗುವುದು ಎಂದು ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿಯು ತೀರ್ಮಾನಿಸಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಗಂಗಾವತಿ, “ನಮ್ಮ ಶಿಕ್ಷಣ, ಹಕ್ಕು, ಹೋರಾಟ” ಎಂಬ ಘೋಷವಾಕ್ಯದಡಿ ಈ ಬಾರಿಯ ಸದಸ್ಯತ್ವ ಅಭಿಯಾನ ನಡೆಸಲಿದ್ದು, ರಾಜ್ಯಾದ್ಯಂತ ಜುಲೈ 25 ರಿಂದ ಆಗಸ್ಟ್ 30 ರವರೆಗೆ ಅಭಿಯಾನ ನಡೆಯಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯುವ ನಿರೀಕ್ಷೆಯಿದೆ. ಕ್ಯಾಂಪಸ್ ಫ್ರಂಟ್ 13 ವರ್ಷಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ, ಸಾಮಾಜಿಕ ಪಿಡುಗುಗಳ ನಿರ್ಮೂಲನೆಗಾಗಿ, ವಿದ್ಯಾರ್ಥಿಗಳ ಹಕ್ಕುಗಳ ಸಂರಕ್ಷಣೆಗಾಗಿ, ಸಮಾಜದಲ್ಲಿ ಪ್ರಭುತ್ವವು ನಡೆಸುತ್ತಿರುವ ಅನ್ಯಾಯಗಳ ವಿರುದ್ಧದ ಹೋರಾಟದಲ್ಲಿ ರಾಜ್ಯದಲ್ಲಿ ಜವಾಬ್ದಾರಿಯುತ ವಿದ್ಯಾರ್ಥಿ ಸಂಘಟನೆಯಾಗಿ ಮುಂಚೂಣಿಯಲ್ಲಿದೆ ಎಂದು ಅವರು ತಿಳಿಸಿದರು.
ಶೈಕ್ಷಣಿಕ ವಲಯಗಳಲ್ಲಿ ವಿದ್ಯಾರ್ಥಿಗಳು ಸಾಧನೆಗೈಯಲು ಅವರಿಗೆ ಬೇಕಾದ ಎಲ್ಲಾ ರೀತಿಯ ಪ್ರೋತ್ಸಾಹಗಳು ನೀಡುತ್ತಿದ್ದು, ಅದರೊಂದಿಗೆ ವಿವಿಧ ಜಾಗೃತಿ ಕಾರ್ಯಕ್ರಮಗಳು, ದೇಶದ ಸಂವಿಧಾನಕ್ಕೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ರಾಜಿರಹಿತ ಹೋರಾಟ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿಗಳ ಮುಂದಿಡುವ ಆಶಯವಾಗಿದೆ. ಈ ನಿಟ್ಟಿನಲ್ಲಿ “ನಮ್ಮ ಶಿಕ್ಷಣ, ಹಕ್ಕು, ಹೋರಾಟ” ಘೋಷವಾಕ್ಯದಡಿ ಈ ಸದಸ್ಯತ್ವ ಅಭಿಯಾನ ನಡೆಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಹಸನ್ ಸಿರಾಜ್, ಫಾತಿಮಾ ಉಸ್ಮಾನ್, ಗೌಸ್ ಹೊಸಪೇಟೆ, ಕ್ಯಾಂಪಸ್ ಫ್ರಂಟ್ ಬೆಂಗಳೂರು ಜಿಲ್ಲಾಧ್ಯಕ್ಷ ಆಕಿಬ್ ಉಪಸ್ಥಿತರಿದ್ದರು.