►ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸರು
ಮಂಗಳೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ವಿವಿ ಘಟಕದ ವತಿಯಿಂದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಪರಿಷತ್ ಉದ್ಘಾಟನಾ ಕಾರ್ಯಕ್ರಮಕ್ಕೆ ಕೋಮು ಪ್ರಚೋದನಕಾರಿ ಭಾಷಣಕಾರ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಆಹ್ವಾನ ನೀಡಿರುವುದನ್ನು ವಿರೋಧಿಸಿ ಬುಧವಾರ ಯೂನಿವರ್ಸಿಟಿ ಮಾರ್ಚ್ ಹಮ್ಮಿಕೊಂಡಿದ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬುಧವಾರ ಬೆಳಗ್ಗೆ ಜಾಥಾ ಮೂಲಕ ಕೋಣಾಜೆಯ ಮಂಗಳೂರು ವಿಶ್ವವಿದ್ಯಾಯದ ಮುಖ್ಯದ್ವಾರದವರೆಗೆ ಆಗಮಿಸಿದರು. ಆದರೆ ಪೊಲೀಸರು ಮುಂದೆ ಹೋಗದಂತೆ ಅವರನ್ನು ತಡೆದು ನಿಲ್ಲಿಸಿದರು. ಈ ವೇಳೆ ಕಾರ್ಯಕರ್ತರು ಮತ್ತು ಪೊಲೀಸರು ನಡುವೆ ವಾಗ್ವಾದ ನಡೆಯಿತು. ನೂರಾರು ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳು ಸ್ಥಳದಲ್ಲೇ ಕುಳಿತು ಪ್ರತಿಭಟನೆ ಆರಂಭಿಸಿದರು.
ಗೋ ಬ್ಯಾಕ್ ಗೋ ಬ್ಯಾಕ್ ಕಲ್ಲಡ್ಕ ಪ್ರಭಾಕರ್ ಭಟ್ ಗೋ ಬ್ಯಾಕ್ …ಸಂಘವು ದೇಶಕ್ಕೆ ಮಾರಕ… ಮುಂತಾದ ಘೋಷಣೆಗಳನ್ನು ಕೂಗಿದರು.
ಸಿಎಫ್ಐ ಮಂಗಳೂರು ಅಧ್ಯಕ್ಷ ಸರ್ಫುದ್ದೀನ್ ಮಾತನಾಡಿ, ಸಮುದಾಯಗಳ ನಡುವೆ ವಿಷ ಬೀಜ ಭಿತ್ತುವ, ಕೋಮು ಭಾಷಣ ಮಾಡುವ ವ್ಯಕ್ತಿಯನ್ನು ವಿದ್ಯಾರ್ಥಿ ಪರಿಷತ್ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಖಂಡನೀಯ. ಪ್ರಭಾಕರ್ ಭಟ್ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಎಲ್ಲಾ ಕೋಮು ಹಿಂಸೆ, ಅನೈತಿಕ ಪೊಲೀಸ್ ಗಿರಿ, ಸೌಹಾರ್ದತೆಗೆ ಧಕ್ಕೆ ತರುವ ಎಲ್ಲಾ ಕೃತ್ಯಗಳಲ್ಲಿ ಅವರ ಪ್ರಚೋದನೆ ಇದೆ. ಇಂತಹ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ಅತಿಥಿಯಾಗಿ ಒಪ್ಪಲು ಸಾಧ್ಯವಿಲ್ಲ. ಉತ್ತಮ ವಿದ್ವಾಂಸರನ್ನು ಕರೆದಿದ್ದರೆ ನಾವು ಸ್ವಾಗತಿಸುತ್ತಿದ್ದೆವು. ಆದರೆ ಭಟ್ ಅವರು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಭಾಷಣ ಮಾಡುವ ಬದಲು ಅವರು ವಿಷ ಬೀಜ ಬಿತ್ತುತ್ತಾರೆ ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಕೋಮು ಪ್ರಚೋದನಾ ಕೃತ್ಯಗಳಲ್ಲಿ ತೊಡಗಿ ಕೋಮು ಹಿಂಸೆಗೆ ಕಾರಣರಾದರೆ ಗೃಹ ಸಚಿವರು ಮತ್ತು ಪೊಲೀಸ್ ಇಲಾಖೆ ನೇರ ಕಾರಣ. ಏಕೆಂದರೆ ಈಗಾಗಲೇ ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಕೋಮು ಪ್ರಚೋದಕ ಭಾಷಣ ಮಾಡುವ ವ್ಯಕ್ತಿಯನ್ನು ಕಾರ್ಯಕ್ರಮಕ್ಕೆ ಕರೆಯದಂತೆ ಮನವಿ ಮಾಡಿದ್ದೆವು. ಆದರೂ ಅವರನ್ನು ಕಾರ್ಯಕ್ರಮಕ್ಕೆ ಕರೆದಿದ್ದಾರೆ ಎಂದು ಹೇಳಿದರು.
ಸಂಘಟನೆಯ ರಾಜ್ಯ ಸಮಿತಿ ಸದಸ್ಯೆ ಫಾತಿಮಾ ಮಾತನಾಡಿ, ಶಿಕ್ಷಣ ಕ್ಷೇತ್ರವಾದ ಮಂಗಳೂರು ವಿಶ್ವವಿದ್ಯಾಲಯಕ್ಕೆ ನೈತಿಕತೆ ಇಲ್ಲದ ವ್ಯಕ್ತಿಯನ್ನು ಕರೆದಿರುವುದು ಖಂಡನೀಯ. ಮಾತು ಮಾತಿಗೂ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುವ ಪ್ರಭಾಕರ್ ಭಟ್, ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ಇದು ಅವರ ಕನಸು. ಅವರ ಕನಸನ್ನು ವಿದ್ಯಾರ್ಥಿಗಳು ನುಚ್ಚು ನೂರು ಮಾಡಲಿದ್ದಾರೆ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯ ಸಮನ್ವಯ ಸಮಿತಿ ಅಧ್ಯಕ್ಷ ರಿಯಾಝ್ ಅಂಕತ್ತಡ್ಕ ಮಾತನಾಡಿ, ವಿಶ್ವವಿದ್ಯಾಲಯದ ಕಾರ್ಯಕ್ರಮಕ್ಕೆ ಕೋಮು ಪ್ರಚೋದನಾ ಭಾಷಣ ಮಾಡುವ ಕಲ್ಲಡ್ಕ ಪ್ರಭಾಕರ್ ಭಟ್ ಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವುದು ವಿಶ್ವವಿದ್ಯಾಲಯಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ. ಲ್ಯಾಪ್ ಟಾಪ್ ಹಗರಣ, ಮೌಲ್ಯಮಾಪನ ಹಗರಣ, ಮೂಲಭೂತ ಸೌಕರ್ಯದ ಕೊರತೆ ಮುಂತಾದ ಸಮಸ್ಯೆಗಳಿಂದ ವಿಶ್ವವಿದ್ಯಾಲಯ ನರಳುತ್ತಿದೆ. ಇವುಗಳನ್ನು ಬಗೆಹರಿಸುವ ಬದಲು ಕುಲಪತಿಯವರು ಕೋಮುವಾದಿ ಪ್ರಭಾಕರ್ ಭಟ್ ಅವರನ್ನು ಕಾರ್ಯಕ್ರಮಕ್ಕೆ ಕರೆಸಿದ್ದಾರೆ. ಜೈಲಿನಲ್ಲಿರಬೇಕಾದ ವ್ಯಕ್ತಿಯನ್ನು ವಿವಿ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ದುರಂತ ಎಂದು ಹೇಳಿದರು.