►► ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು
ಮಂಗಳೂರು: ಸಮವಸ್ತ್ರ ಹಂಚಿಕೆಯಲ್ಲಿ ಗೋಲ್ ಮಾಲ್ ನಡೆದಿದೆ ಎಂದು ಆರೋಪಿಸಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಮುತ್ತಿಗೆ ಹಾಕಿ ಘೋಷಣೆ ಕೂಗಿದ ಘಟನೆ ಮಂಗಳೂರಿನ ಹಂಪನಕಟ್ಟೆ ಬಳಿಯ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದಿದೆ.
ಕಾರ್ಯಕ್ರಮದ ಸ್ಥಳಕ್ಕೆ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಹಂಪನಕಟ್ಟೆ ಬಳಿಯ ಪದವಿ ಪೂರ್ವ ಕಾಲೇಜು ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಬುಧವಾರ ನಿಗದಿಯಾಗಿತ್ತು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಶಿಲಾನ್ಯಾಸ ನೆರವೇರಿಸಲು ಆಗಮಿಸಿದ್ದರು.
ಈ ವೇಳೆ ಸಮವಸ್ತ್ರ ಹಂಚಿಕೆಯಲ್ಲಿ ಸಚಿವರು ಭ್ರಷ್ಟಾಚಾರವೆಸಗಿದ್ದಾರೆ ಎಂದು ಆರೋಪಿಸಿ, ಸಿಎಫ್ಐ ಕಾರ್ಯಕರ್ತರು, “ಬಿ.ಸಿ.ನಾಗೇಶ್ ಗೋ ಬ್ಯಾಕ್” ಎಂದು ಘೋಷಣೆ ಕೂಗಿ ಭಿತ್ತಿ ಪತ್ರ ಪ್ರದರ್ಶಿಸಿದರು. ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದು ಮಂಗಳೂರು ಪುರಭವನದ ಆವರಣದಲ್ಲಿ ಕೂಡಿ ಹಾಕಿದರು.
ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲು ಸಚಿವರು ಹುನ್ನಾರ ಮಾಡಿದ್ದಾರೆ. ಹಿಜಾಬ್ ಹೆಸರಿನಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದರು.