ಮಧ್ಯಂತರ ಆದೇಶವನ್ನು ದುರ್ಬಳಕೆ ಮಾಡಿ ವಿದ್ಯಾರ್ಥಿಗಳನ್ನು ಶಾಲೆಗೆ ನಿರ್ಬಂಧಿಸಿದ ಶಿಕ್ಷಕರ ವಿರುದ್ಧ ಕ್ರಮಕ್ಕೆ ಕ್ಯಾಂಪಸ್ ಫ್ರಂಟ್ ಆಗ್ರಹ

Prasthutha|

ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಧ್ಯಂತರ ಆದೇಶವನ್ನು ದುರ್ಬಳಕೆ ನಡೆಸಿಕೊಂಡು ರಾಜ್ಯಾದ್ಯಂತ ಹಲವಾರು ವಿದ್ಯಾರ್ಥಿನಿಯರಿಗೆ ಶಾಲೆಗೆ ನಿರ್ಬಂಧಿಸಿದ್ದು ಅಸಹ್ಯಕರವಾಗಿದೆ ಹಾಗೂ ಈ ನಿರ್ಬಂಧ ವಿಧಿಸಿದ ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಉಡುಪಿ ಹಿಜಾಬ್ ಪ್ರಕರಣವು ಹೈಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿದೆ. ಈ ಮಧ್ಯೆ ನ್ಯಾಯಾಲಯವು ಫೆಬ್ರವರಿ ಹತ್ತರಂದು ಮಧ್ಯಂತರ ಆದೇಶವನ್ನೂ ನೀಡಿದೆ. ಈ ಆದೇಶವು ದಾವೆ ಹೂಡಿರುವ ವಿದ್ಯಾರ್ಥಿಗಳಿಗೆ ಅಂದರೆ ಉಡುಪಿಯ ಮಹಿಳಾ ಪಿಯು ಕಾಲೇಜು ಹಾಗೂ ಕುಂದಾಪುರದ ಪಿಯು ಕಾಲೇಜು ಮತ್ತು ಸಮವಸ್ತ್ರ ಸಂಹಿತೆ ಮಾಡಿದ ಸಂಸ್ಥೆಗಳಿಗೆ ಮಾತ್ರ ಎಂದು ಆದೇಶದ ಹನ್ನೊಂದನೆ ಅಂಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಆದರೆ ಇಂದು, ಈ ಮೊದಲೇ ಶಿರವಸ್ತ್ರ ಧರಿಸುತ್ತಿದ್ದ ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಶಾಲಾಡಳಿತ ಮಂಡಳಿ ಮತ್ತು ಶಿಕ್ಷಕರು ಶಾಲಾ ಆವರಣದ ಮುಂಭಾಗದಲ್ಲೇ ತಡೆದು ಹೆದರಿಸಿ ಸ್ಕಾರ್ಫ್ ಬಿಚ್ಚುವಂತೆ ಮತ್ತು ಕೆಲ ಮುಸ್ಲಿಂ ಶಿಕ್ಷಕಿಯರನ್ನು ಗೇಟ್ ಬಳಿಯೇ ಸಾರ್ವಜನಿಕವಾಗಿ ಬುರ್ಖಾ ಬಿಚ್ಚಿಸುವ ಅಮಾನವೀಯ ಘಟನೆಗಳು ನಡೆದಿವೆ. ಅಲ್ಲದೇ ಮಹಿಳೆಯರ ಖಾಸಗಿ ವಿಚಾರಗಳನ್ನು ಮಾಧ್ಯಮವೂ ಕೂಡ ಬೇಕಾ ಬಿಟ್ಟಿ ಪ್ರಸಾರ ಮಾಡಿವೆ. ಇನ್ನೊಂದು ಕಡೆ ಮಾಧ್ಯಮ ಪ್ರತಿನಿಧಿಗಳು ಪರೀಕ್ಷಾ ಕೊಠಡಿಯೊಳಗೆ ಮತ್ತು ತರಗತಿ, ಶಿಕ್ಷಕರ ಕೊಠಡಿಯೊಳಗೆ ಅಕ್ರಮ ಪ್ರವೇಶಿಸಿ ವಿದ್ಯಾರ್ಥಿಗಳನ್ನು, ಶಿಕ್ಷಕಿಯರನ್ನು ವಿಡಿಯೋ ಚಿತ್ರೀಕರಿಸಿ ಪ್ರಸಾರ ಮಾಡುತ್ತಿರುವುದು ಕಂಡುಬಂದಿದೆ.
ರಾಜ್ಯದ ಜನತೆಗೆ ತಪ್ಪು ಸಂದೇಶವನ್ನು ರವಾನಿಸಿದ ಕೆಲ ಮಾಧ್ಯಮಗಳಿಂದ ರಾಜ್ಯದಲ್ಲಿ ಮುಸ್ಲಿಮರು ಆತಂಕದಲ್ಲಿ ಬದುಕುವ ವಾತಾವರಣ ಸೃಷ್ಟಿಸಲಾಗುತ್ತಿದ್ದು ಮಾತ್ರವಲ್ಲದೆ ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆಗಳಿಗೆ ತೆರಳಲು ಭಯಪಡುತ್ತಿದ್ದಾರೆ. ಉಚ್ಚ ನ್ಯಾಯಾಲಯವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ರಾಜ್ಯದ ಜನರಿಗೆ ನೈಜ ಮತ್ತು ಸ್ಪಷ್ಟ ಮಾಹಿತಿ ತಲುಪಿಸುವ ಕುರಿತು ಕ್ರಮ ವಹಿಸಿ, ಇಂದು ವಿದ್ಯಾರ್ಥಿನಿಯರನ್ನು ಶಿರವಸ್ತ್ರ ಧರಿಸಿದ ಕಾರಣಕ್ಕೆ ತರಗತಿ ಮತ್ತು ಪರೀಕ್ಷೆಗಳಿಗೆ ನಿರ್ಬಂಧಿಸಿದ ಸಂಬಂಧಪಟ್ಟ ಶಾಲಾ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅಥಾವುಲ್ಲ ಪುಂಜಾಲಕಟ್ಟೆ ಆಗ್ರಹಿಸಿದ್ದಾರೆ.

Join Whatsapp