ಬೆಂಗಳೂರು: ಬಸ್ನಲ್ಲಿ ಬಂದು, ರಾಮೇಶ್ವರಂ ಕೆಫೆಯಲ್ಲಿ ರವೆ ಇಡ್ಲಿ ತಿಂದು ಬಾಂಬ್ ಇಟ್ಟು ಹೋಗಿದ್ದಾನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.
ಬ್ಲಾಸ್ಟ್ ಆಗಿರೋದು ಬಾಂಬ್, ಆದರೆ ಕಡಿಮೆ ಅಪಾಯವುಳ್ಳ ಟೈಮರ್ ಬಾಂಬ್ ಎಂದ ಶಿವಕುಮಾರ್, ಸ್ಫೋಟದ ಸೌಂಡ್ ಹೆಚ್ಚು ಬಂದಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬ್ಲಾಸ್ಟ್ ಆಗಿರೋ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಮಾಹಿತಿ ನೀಡಿದರು.
ಎಫ್ಎಸ್ಎಲ್ ತಂಡ, ಬಾಂಬ್ ನಿಷ್ಕ್ರಿಯ ದಳ ಮತ್ತು ಸಿಸಿಬಿ ಪೊಲೀಸರು ಸ್ಥಳದಲ್ಲಿದ್ದಾರೆ. ಈ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಾಂಬ್ ಸ್ಪೋಟ ಪಾಕಿಸ್ತಾನ ಜಿಂದಾಬಾದ್ ಪ್ರಕರಣದ ಮುಂದುವರಿದ ಭಾಗ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಡಿಕೆ ಶಿವಕುಮಾರ್, ಬಿಜೆಪಿಯವರಿಗೆ ಮಾಡೋಕೆ ಕೆಲಸ ಇಲ್ಲ. ರಾಜಕಾರಣ ಮಾಡಬೇಕು ಅಂತ ಹೇಳಿಕೆ ಕೊಡುತ್ತಿದ್ದಾರೆ. ಅವರು ಏನಾದ್ರೂ ಹೇಳಿಕೊಳ್ಳಲಿ ಬಿಡಿ ಎಂದರು.
ಸುಮಾರು 35 ವರ್ಷದ ಯುವಕನಿಂದ ಈ ಕೃತ್ಯ ನಡೆದಿದೆ. ಬ್ಯಾಗ್ ಇಟ್ಟ ಒಂದು ಗಂಟೆ ಬಳಿಕ ಸ್ಫೋಟವಾಗಿದೆ ಎಂದ ಉಪಮುಖ್ಯಮಂತ್ರಿ. ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನವಾಗಲಿದೆ ಎಂದಿದ್ದಾರೆ.