ನಾಳೆ ಮುಸ್ಲಿಮ್ ಮಹಿಳೆಯರ ಹಕ್ಕುಗಳ ದಿನ ಆಚರಿಸಲು ಸರ್ಕಾರ ಕರೆ

Prasthutha|

ತ್ರಿವಳಿ ತಲಾಖ್ ರದ್ದುಗೊಂಡು 2 ವರ್ಷ ಹಿನ್ನೆಲೆ

- Advertisement -

ನವದೆಹಲಿ, ಜು.31: ತ್ರಿವಳಿ ತಲಾಖ್ ರದ್ದು ಕಾನೂನು ಜಾರಿಗೊಳಿಸಿ ಎರಡು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 1ರಂದು ದೇಶಾದ್ಯಂತ ಮುಸ್ಲಿಮ್ ಮಹಿಳೆಯರ ಹಕ್ಕುಗಳ ದಿನವನ್ನು ಆಚರಿಸಲು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಕರೆ ನೀಡಿದೆ.

ತ್ರಿವಳಿ ತಲಾಖ್ ಅನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವ ಕಾನೂನನ್ನು ಆಗಸ್ಟ್ 1, 2019 ರಂದು ಜಾರಿಗೆ ತರಲಾಗಿತ್ತು.

- Advertisement -

 ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಶನಿವಾರ ಮಾತನಾಡಿ, ಕಾನೂನು ಜಾರಿಗೆ ಬಂದ ನಂತರ ತ್ರಿವಳಿ ತಲಾಖ್ ಪ್ರಕರಣಗಳಲ್ಲಿ ಗಣನೀಯ ಇಳಿಕೆಯಾಗಿದೆ. ದೇಶಾದ್ಯಂತ ಮುಸ್ಲಿಂ ಮಹಿಳೆಯರು ಈ ಕಾನೂನನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರೆ ಎಂದು ಹೇಳಿದರು.

ಸರ್ಕಾರವು ಮುಸ್ಲಿಂ ಮಹಿಳೆಯರ ಸ್ವಾವಲಂಬನೆ, ಸ್ವಾಭಿಮಾನ ಮತ್ತು ಆತ್ಮ ವಿಶ್ವಾಸವನ್ನು ವೃದ್ಧಿಸಿದೆ. ತ್ರಿವಳಿ ತಲಾಖ್ ವಿರುದ್ಧ ಕಾನೂನು ತರುವ ಮೂಲಕ ಅವರ ಸಾಂವಿಧಾನಿಕ, ಮೂಲಭೂತ ಮತ್ತು ಪ್ರಜಾಪ್ರಭುತ್ವ ಹಕ್ಕುಗಳನ್ನು ರಕ್ಷಿಸಿದೆ ಎಂದು ನಖ್ವಿ ಬಣ್ಣಿಸಿದರು.

ಭಾನುವಾರ, ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಖಾತೆ ಸಚಿವ ಭೂಪೇಂದರ್ ಯಾದವ್ , ಮುಸ್ಲಿಂ ಮಹಿಳಾ ಹಕ್ಕುಗಳ ದಿನದ ಅಂಗವಾಗಿ ನವದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.



Join Whatsapp