AIADMK ಪಕ್ಷದ ಪ್ರಣಾಳಿಕೆ ಬಿಡುಗಡೆಯ ನಂತರ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪಳನಿಸಾಮಿ, ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಯನ್ನು ಕೈಬಿಡುವುದಾಗಿ ಭರವಸೆ ನೀಡಿದ್ದರು. ಇದಕ್ಕೆ ತನ್ನ ಮೈತ್ರಿ ಪಕ್ಷವಾದ ಬಿಜೆಪಿಯೂ ಒಪ್ಪಿಗೆ ನೀಡಿದೆ ಎಂದು ಹೇಳಿಕೊಂಡಿದ್ದರು. ಈ ಬಗ್ಗೆ ಸುದ್ಧಿಗಾರರೊಂದಿಗೆ ಮಾತನಾಡಿದ ಬಿಜೆಪಿಯ ತಮಿಳುನಾಡು ಉಸ್ತುವಾರಿ ಸಿಟಿ ರವಿ ಈ ಪ್ರಣಾಳಿಕೆ ಕೇವಲ AIADMK ಯದ್ದು. ಹೊರತಾಗಿ ಬಿಜೆಪಿ ಪಕ್ಷದಲ್ಲ ಎಂದು ಹೇಳಿದ್ದಾರೆ.
AIADMK ಪ್ರಣಾಳಿಕೆಯಿಂದ ಬಿಜೆಪಿಯನ್ನು ದೂರವಿಟ್ಟ ಸಿ.ಟಿ.ರವಿ, “ಇದು AIADMK ಪ್ರಣಾಳಿಕೆ, ಎನ್‌ಡಿಎಯದ್ದಲ್ಲ. ಇಲ್ಲಿಯವರೆಗೆ ಅವರು (AIADMK) ನಮ್ಮೊಂದಿಗೆ ಈ ಬಗ್ಗೆ ಚರ್ಚಿಸಿಲ್ಲ” ಎಂದು ತಿಳಿಸಿದ್ದಾರೆ. “ಈ ಹಿಂದೆ ನಾವು ಶ್ರೀಲಂಕಾದ ತಮಿಳರಿಗೆ ಪೌರತ್ವ ನೀಡಿದ್ದೇವೆ. ಆದರೆ ಸಿಎಎ ಮೂಲಕ ಪೌರತ್ವ ನೀಡುವುದು ತಪ್ಪು ಎಂದು ಹೇಳುವುದು ಸ್ವೀಕಾರಾರ್ಹವಲ್ಲ” ಎಂದು ರವಿ ಮಿತ್ರಪಕ್ಷದ ನಾಯಕರ ಮಾತಿಗೆ ವಿರುದ್ಧವಾಗಿ ಹೇಳಿದ್ದಾರೆ.
ಒಂದೆಡೆ ತಮಿಳುನಾಡು ಮುಖ್ಯಮಂತ್ರಿ ಪಳನಿಸಾಮಿ ಪ್ರಣಾಳಿಕೆಯಲ್ಲಿ ಸಿಎಎಯನ್ನು ಕೈಬಿಡುವ ಭರವಸೆ ನೀಡಿದರೆ ಇನ್ನೊಂದೆ ಕಡೆ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ತಮಿಳುನಾಡು ಉಸ್ತುವಾರಿ ಸಿಟಿ ರವಿ “ಸಿಎಎ ಕೈಬಿಡುವ ಯಾವುದೇ ಚರ್ಚೆಯೂ ಇಲ್ಲ” ಎಂದು ಒತ್ತಿ ಹೇಳಿದ್ದಾರೆ. ಒಟ್ಟಿನಲ್ಲಿ ಈ ಮೈತ್ರಿಪಕ್ಷಗಳ ದ್ವಂದ್ವ ಹೇಳಿಕೆ ಈಗ ಸುದ್ಧಿಯಾಗಿದೆ.