ಮಾಂಸ ತಿಂದು ದೇವಸ್ಥಾನ ಹೋದ ಸಿ.ಟಿ.ರವಿ: ನೀವು ಡೋಂಗಿ ಧರ್ಮ ರಕ್ಷಕರಲ್ಲವೇ ಎಂದ ಸಿಎಂ ಇಬ್ರಾಹೀಂ

Prasthutha|

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ ರವಿ ಮಾಂಸ ತಿಂದು ದೇಗುಲಕ್ಕೆ ಹೋಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ನೀವು ಡೋಂಗಿ ಧರ್ಮ ರಕ್ಷಕರಲ್ಲವೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹೀಂ ತಿವಿದಿದ್ದಾರೆ.

- Advertisement -

ಈ ಬಗ್ಗೆ ಸಿಎಂ ಇಬ್ರಾಹೀಂ ಟ್ವೀಟ್ ಮಾಡಿದ್ದು, ಬೇರೆಯವರು ಮಾಂಸ ತಿಂದು ದೇವಸ್ಥಾನಕ್ಕೆ ಹೋದರೆ ಬಿಜೆಪಿಯವರು ಕಿರುಚಾಡುತ್ತೀರಿ. ಅದರಲ್ಲೇ ಕೆಟ್ಟದಾಗಿ ರಾಜಕೀಯ ಮಾಡುತ್ತೀರಿ. ಆದರೆ ಈಗ ನೀವೇ ಚೆನ್ನಾಗಿ ಬಾಡೂಟ ಸವಿದು ದೇವಸ್ಥಾನಕ್ಕೆ ಹೋಗಿದ್ದೀರಿ. ಈಗ ನಾವೇನು ಮಾಡಬೇಕು ಹೇಳಿ ಸಿ.ಟಿ.ರವಿ ಅವರೆ ಎಂದು ಪ್ರಶ್ನಿಸಿದ್ದಾರೆ.

ಇದು ನಿಮ್ಮ ಡೋಂಗಿ ಧರ್ಮ ರಕ್ಷಣೆ ಅಲ್ಲವೆ? ಈಗ ನಿಮ್ಮ ಡೋಂಗಿತನದ ಮುಖವಾಡ ಕಳಚಿ ಬಿದ್ದು ನೀವು ಬೆತ್ತಲಾಗಿದ್ದೀರಿ. ಮುಂದಿನ ಚುನಾವಣೆಯಲ್ಲೂ ಇದು ಮುಂದುವರೆಯುತ್ತದೆ. ನಿಮ್ಮನ್ನು ಜನರು ಮನೆಯಲ್ಲಿ ಕೂರಿಸುತ್ತಾರೆ. ಅಂದ ಹಾಗೆ ಮಾಂಸ ಯಾವುದರದ್ದು ಸಿಟಿ ರವಿಯವರೆ ಎಂದು ಪ್ರಶ್ನಿಸಿದ್ದಾರೆ.

- Advertisement -

ಸುಬ್ರಮಣ್ಯ ಭಟ್ ಬೈಂದೂರು ಎಂಬುವವರು ಫೇಸ್ ಬುಕ್ ನಲ್ಲಿ ಫೋಸ್ಟ್ ಮಾಡಿದ್ದು, ಮಾಂಸಾಹಾರದ ಕುರಿತು ಮೇಲು ಕೀಳು ಎಂದೆಲ್ಲ ಕತೆ ಕಟ್ಟುವ ಸಂಘಟನೆಯ ಮಹಾನ್ ನಾಯಕ ಬಾಯಿಬಿಟ್ಟರೆ ದೇವರು, ಸಂಸ್ಕಾರ, ಸಂಸ್ಕೃತಿಯ ಕುರಿತು ಉದ್ದುದ್ದ ಭಾಷಣ ಬಿಗಿಯುವ ಸಿ.ಟಿ.ರವಿಯವರು ಭಟ್ಕಳದಲ್ಲಿ ಬಾಡೂಟ ಮಾಡಿ ನಾಗಬನಕ್ಕೆ ಭೇಟಿಕೊಟ್ರಂತೆ ಆಸ್ತಿಕ ಬಂಧುಗಳೇ…!
ಹಿಂದುತ್ವದ ಅಮಲೇರಿಸಿಕೊಂಡಿರುವ ಅಂಧಭಕ್ತರೇ ಕರಾವಳಿಯಲ್ಲಿ ಎಲ್ಲ ದೇವರಿಗಿಂತ ಅತಿಹೆಚ್ಚು ಭಯಭಕ್ತಿ ನಾಗದೇವರ ಮೇಲೆ ತೋರಿಸುತ್ತಾರೆ. ಎಷ್ಟೆಂದರೆ ನಾಗ ಪ್ರತಿಷ್ಟೆ, ನಾಗಸಂಸ್ಕಾರ ಮಾಡಬೇಕಾದರೆ 48 ದಿನಗಳ ಮೊದಲೇ ಮಾಂಸಹಾರ ತ್ಯಜಿಸುತ್ತಾರೆ. ಅಂತಹ ನಂಬಿಕೆ ಇರುವ ಸ್ಥಳದಲ್ಲಿ ಸಿ.ಟಿ.ರವಿ ಶಾಸಕ ಸುನಿಲ್ ನಾಯ್ಕ್ ರ ಮನೆಯಲ್ಲಿ ಕೆಂಪು ಜುಬ್ಬಾ ಹಾಕ್ಕೊಂಡು ಭರ್ಜರಿ ಮಾಂಸದೂಟ ಮಾಡಿ, ಅದೇ ಕೆಂಪು ಜುಬ್ಬದಲ್ಲಿ ನಾಗಬನಕ್ಕೆ ಹೋಗಿ, ಕರಿಬಂಟ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿ ಸನ್ಮಾನ (ಯಾವ ಪುರುಷಾರ್ಥಕ್ಕೆ ಅಂತ ಗೊತ್ತಿಲ್ಲ) ಮಾಡಿಸಿಕೊಂಡವರಿಗೆ ನಮ್ಮ ಧರ್ಮದ, ಜನರ ನಂಬಿಕೆಯ ಬಗೆಗೆ ಎಷ್ಟು ತಾತ್ಸಾರವಿರಬಹುದು….? ಹೀಗೆ ಜನರ ಧಾರ್ಮಿಕ ನಂಬಿಕೆಗೆ ಅಪಚಾರಗೈದವರ ಕುರಿತು ಅಂಧಭಕ್ತರು ಈಗ ಏನು ಹೇಳುತ್ತಾರೆ… ಎಂದು ಪ್ರಶ್ನಿಸಿದ್ದಾರೆ.



Join Whatsapp