ಪ್ರಭುತ್ವ ಪ್ರಾಯೋಜಿತ ಜನಾಂಗ ದ್ವೇಷ !

Prasthutha|

►►ಹಿಂದೂ-ಮುಸ್ಲಿಮ್ ಸಾಮರಸ್ಯದ ಅನನ್ಯತೆಗೆ ಕೊಳ್ಳಿ

- Advertisement -

ಕರ್ನಾಟಕದ ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆಯನ್ನೇ ಮುಂದಿಟ್ಟುಕೊಂಡು ಹಿಂದುತ್ವ ಸಂಘಟನೆಗಳು ರಾಜ್ಯಾದ್ಯಂತ ಮುಸ್ಲಿಮರ ವಿರುದ್ದ ಹೊಸಬಗೆಯ ಸೇಡಿಗಿಳಿದಿವೆ. ಹರ್ಷನ ಹತ್ಯೆಗೆ ಪ್ರತೀಕಾರವೆಂಬಂತೆ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ತಾಕೀತು ಮಾಡುತ್ತಿವೆ. ಹರ್ಷನ ಹತ್ಯೆಯನ್ನು ಮುಸ್ಲಿಮರಾಗಲಿ, ಮುಸ್ಲಿಮ್ ಸಂಘಟನೆಗಳಾಗಲಿ ಖಂಡಿಸುತ್ತಿಲ್ಲ. ಹಿಂದೂ ಕಾರ್ಯಕರ್ತನ ಹತ್ಯೆಯ ಹಿಂದೆ ಮುಸ್ಲಿಮರ ಹಿಂದೂ ವಿರೋಧಿ ದ್ವೇಷವಿದೆ. ಹೀಗಿರುವಾಗ ಹಿಂದೂಗಳು ಆಚರಿಸುವ ಜಾತ್ರೆ-ಉತ್ಸವಗಳಲ್ಲಿ ಮುಸ್ಲಿಮರಿಗೆ ಅವಕಾಶವಿಲ್ಲ. ಇದನ್ನು ಮುಸ್ಲಿಮರಿಗೆ ಹಿಂದೂ ಸಮಾಜ ವಿಧಿಸುವ ಸಾಮಾಜಿಕ ಬಹಿಷ್ಕಾರ ಎಂಬುದನ್ನು ಘೋಷಿಸುತ್ತಾ ತಮ್ಮ ನಿಲುವಿಗೆ ಇದು ಸಮರ್ಥನೆಯಾಗಿಯೂ ಬಳಸಿಕೊಳ್ಳುತ್ತಿವೆ. ಒಂದು ವೈಯಕ್ತಿಕ ದ್ವೇಷದಿಂದ ನಡೆದ ಹರ್ಷನ ಕೊಲೆಯನ್ನು ಇಡೀ ಒಂದು ಧರ್ಮದ ಜನಸಮುದಾಯದ ತಲೆಗೆ ಕಟ್ಟಿ ಹಿಂದೂ -ಮುಸ್ಲಿಮ್ ಬಾಂಧವ್ಯವನ್ನು ನುಚ್ಚು ನೂರು ಮಾಡುವ ಈ ನಡೆ ಒಂದು ರಾಜಕೀಯ ಲಾಭಕೋರತನದ ಆಟ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ರಾಜ್ಯಾದ್ಯಂತ ಈಗ ಜಾತ್ರೆ- ಸಾಮೂಹಿಕ ಹಬ್ಬಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ವಿರೋಧಿಸಿ ಹಿಂದೂ ಸಂಘಟನೆಗಳು ಕರೆ ಕೊಡುತ್ತಿರುವುದು ಮತ್ತು ಅದಕ್ಕೆ ಪೂರಕವಾಗಿಯೇ ಸರ್ಕಾರವೂ ನಡೆದುಕೊಳ್ಳುತ್ತಿರುವುದು ಸಮಾಜವನ್ನು ಧರ್ಮಾಧಾರಿತವಾಗಿ ಒಡೆದು ಹೋಳಾಗಿಸುವ ಪ್ರಭುತ್ವ ಪ್ರಾಯೋಜಿತ ಕೇಡೊಂದು ನೆಲೆಗೊಳ್ಳುತ್ತಿದೆ. ರಾಜ್ಯ ವಿಧಾನ ಸಭಾ ಚುನಾವಣೆಗೆ ಇನ್ನೂ 11 ತಿಂಗಳು ಬಾಕಿ ಇರುವಾಗಲೇ ಹಿಂದೂ ಮತಗಳ ಕ್ರೋಢೀಕರಣದ ರಾಜಕಾರಣವೊಂದು ಶುರುವಾಗಿದೆ. ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿ ಮತ್ತದೆ ಧರ್ಮದ ಅಮಲಿನಲ್ಲಿ ಜನರನ್ನು ಮೋಸಗೊಳಿಸಿ ಮತ್ತೆ ಅಧಿಕಾರ ಹಿಡಿಯುವ ಬಿಜೆಪಿಯ ಹಳೆಯ ಚಾಳಿ ಕೂಡ ಹೌದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಲ ಆರೆಸ್ಸೆಸ್ಸಿಗರಿಗಿಂತಲೂ ಉಗ್ರವಾಗಿ  ಹಿಂದೂತ್ವವನ್ನು  ಆವಾಹಿಸಿಕೊಂಡು   ವರ್ತಿಸುತ್ತಿರುವುದು ಸೌಹಾರ್ದ ಪರಂಪರೆಯ ಬಲಿಯ ಅಪಶಕುನದಂತಿದೆ.

- Advertisement -

ವಿಎಚ್ ಪಿ, ಬಜರಂಗದಳ, ಶ್ರೀರಾಮಸೇನೆಗಳು  ಜಾತ್ರೆ, ಪರಿಷೆ, ದೇವಸ್ಥಾನದ ಉತ್ಸವಗಳಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದು ಎಂಬ ಸಾಮಾಜಿಕ ಬಹಿಷ್ಕಾರವನ್ನು ಬಹಿರಂಗವಾಗಿಯೇ ಘೋಷಿಸಿವೆ. ಇದು ಸಂವಿಧಾನದ ನಿರ್ದೇಶಕ ತತ್ವಗಳಿಗೆ ಬಗೆದ ದೊಡ್ಡ ದ್ರೋಹ.  ಜಾತ್ರೆಗಳು, ಸಾರ್ವತ್ರಿಕ ಹಬ್ಬ-ಉತ್ಸವಗಳು ಈ ಸಮಾಜದ ಎಲ್ಲಾ ಜನರ ಒಳಗೊಂಡ ಬಹುತ್ವದ ಸಾಂಸ್ಕೃತಿಕ ವೈಭವವಾಗಿ ಆದಿ ಕಾಲದಿಂದಲೂ ನಡೆದುಕೊಂಡು ಬಂದಿವೆ.  ಹಳ್ಳಿಯಿಂದ ಹಿಡಿದು ನಗರದ ಪ್ರದೇಶಗಳ ವರೆಗೂ ಸಾಂಸ್ಕೃತಿಕ ಒಳಗೊಳ್ಳುವಿಕೆಯ (Cultural inclusions) ಹಾದಿ ಧರ್ಮಾತೀತವಾಗಿಯೂ, ಜಾತ್ಯತೀತವಾಗಿಯೂ ಮುನ್ನಡೆದುಕೊಂಡು ಬಂದ ಚರಿತ್ರೆಯೇ ಈ ನಾಡಿನ ಘನತೆ ಎನ್ನುವಷ್ಟರ ಮಟ್ಟಿಗೆ  ಸಾಮರಸ್ಯದ ಜನಸಂಸ್ಕೃತಿ, ಶರಣರು, ಸೂಫಿ-ಸಂತರ ಬದುಕು ನಡೆ-ನುಡಿಗಳು ನಮಗೆಂದೂ ದಾರಿದೀಪದಂತೆ ಇವೆ. ರಾಜ್ಯದಲ್ಲಿ ಬಹುಜನರ ನಂಬುಗೆಯ ಅನೇಕ ಧಾರ್ಮಿಕ ಆಚರಣೆಗಳಿವೆ.  ಹಿಂದೂ -ಮುಸ್ಲಿಮ್ ಭಾವೈಕ್ಯತೆಯ ಹಬ್ಬಗಳು, ಉತ್ಸವಗಳು, ಉರೂಸ್ ಗಳು ಈ ನಾಡಿನ ಸಾಮರಸ್ಯದ ಅಸ್ಮಿತೆಗಳಂತೆ ಇಂದಿಗೂ ಧರ್ಮಾತೀತವಾಗಿ ಒಂದುಗೂಡಿಸಿವೆ. ಬಹುತ್ವ ಭಾರತವೆಂದರೆ ಅದು ಭಿನ್ನ ಭಿನ್ನ ಬಗೆಯ ಆಚರಣೆ. ಆರಾಧನೆಗಳೊಂದಿಗೆಯೇ ಒಂದಾಗಿ ಬಾಳುವ ಜೀವನಪ್ರೀತಿ ಎಂಬುದಕ್ಕೆ  ಹೆಜ್ಜೆಗೊಂದು ಕುರುಹುಗಳು ಸಿಗಬಲ್ಲವು.  ಆದರೆ ಮತ ರಾಜಕಾರಣಕ್ಕಾಗಿ ಇಂತಹ ಚರಿತ್ರೆಯ  ಸೌಹಾರ್ದ ನಡಿಗೆಯನ್ನೇ ಅಳಿಸಿ ಹಾಕುವ ಕೇಡನ್ನು  ಬಿತ್ತಲಾಗುತ್ತಿದೆ. 

ಭಾರತ ವೈದಿಕ ಪ್ರೇಣಿತ ಹಿಂದೂತ್ವದ ಶ್ರೇಷ್ಠತೆಯ ತೀವ್ರ ರೋಗಕ್ಕೆ ತುತ್ತಾಗಿ ಎಂಟು ವರ್ಷಗಳೇ ಕಳೆದಿವೆ. ಇದು 1925 ರಲ್ಲಿ ಆರೆಸ್ಸೆಸ್ ಹುಟ್ಟಿದಾಗಲೇ ಈ ರೋಗ ಮೊಳಕೆಯಾಗಿ ಕೀವುಗಟ್ಟಿತ್ತು. 1951ರಲ್ಲಿ ಶ್ಯಾಮಪ್ರಸಾದ್ ಮುಖರ್ಜಿ ಅವರು ಆರೆಸ್ಸೆಸ್ ನ ಗೋಳ್ವಾಲ್ಕರ್ ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡು ಜನಸಂಘ ಸ್ಥಾಪನೆ ಮಾಡಿದಂದಿನಿಂದ  ಈ ರೋಗ  ರಣಗೊಂಡು ವಾಸಿಯಾಗಲಾರದಷ್ಟು  ಗಾಯವಾಗಿ  ಈಗ ದೇಶವನ್ನು ಪರಿಪರಿಯಾಗಿ ಬಾಧಿಸುತ್ತಿದೆ.  ಮತ್ತೂ ಕೊರೋನಾಗಿಂತಲೂ ಮಾರಕವಾಗಿ, ವೇಗವಾಗಿ ಈ ಸಮಾಜವನ್ನು ವ್ಯಾಪಿಸುತ್ತಿದೆ ಎಂಬುದನ್ನು ಯಾರಾದರೂ ಹೇಳಿದರೆ ಅವರು ದೇಶದ್ರೋಹಿ ಪಟ್ಟಕ್ಕೆ ಗುರಿಯಾಗಬಲ್ಲರು. ಪ್ರಸ್ತುತ ಭಾರತದ ಪಾಡು ಈ ಬಗೆಯದ್ದಾಗಿದೆ. ಆರೆಸ್ಸೆಸ್ ತನ್ನ ಹಿಂದೂತ್ವದ ಕಾರ್ಯಸೂಚಿಯನ್ನು ಇನ್ನಷ್ಟು ತೀವ್ರಗಾಮಿ ರೂಪದಲ್ಲಿ ಅನುಷ್ಠಾನಗೊಳಿಸುವತ್ತ ಹೆಜ್ಜೆ ಗಳು ಬಿರುಸುಗೊಂಡಿವೆ. ದೇಶದ ಅಲ್ಪಸಂಖ್ಯಾತರ ವಿರುದ್ಧ ಜನಾಂಗೀಯ ದ್ವೇಷವನ್ನು  ಉನ್ಮತ್ತಗೊಳಿಸುವುದು ಹಾಗೂ ಹಿಂದೂತ್ವದ ಶ್ರೇಷ್ಠತೆಯ ವ್ಯಸನವನ್ನು ಹರಡುವುದು  ಇದರ ಮುಖ್ಯಾಂಶಗಳು ಎಂಬುದನ್ನು ಆರೆಸ್ಸೆಸ್ ನ ಗೋಳ್ವಾಲ್ಕರ್ ನ ಬಂಚ್ ಆಫ್ ಥಾಟ್ಸ್’ನ ಥಿಯೆರಿ.

1990ರ ದಶಕದಲ್ಲಿ  ರಾಮರಥಯಾತ್ರೆಯ ಮೂಲಕ ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಂಡ ಬಿಜೆಪಿ ಅಧಿಕಾರದ ರುಚಿ ಉಂಡಿತು. 1998ರ ಅವಧಿಯಲ್ಲಿ ದೇಶದಲ್ಲಿ ಕ್ರೈಸ್ತರ ಮೇಲೆ, ಚರ್ಚ್ ಗಳ ಮೇಲೆ ಆರೆಸ್ಸೆಸ್ ನ ಕಾಲಾಳು ಸಂಘಟನೆಗಳಾದ ವಿಎಚ್ ಪಿ, ಬಜರಂಗದಳ, ಶ್ರೀರಾಮಸೇನೆ ದಾಳಿ ನಡೆಸಿದವು. ಮತಾಂತರ, ಬಲತ್ಕಾರದ ಮದುವೆಯ ಆರೋಪಗಳನ್ನು ಮುಂದಿಟ್ಟುಕೊಂಡು ಕ್ರೈಸ್ತ್ತರ ಮೇಲೆ ದಾಳಿ ಮಾಡಿದ ಹಿಂದೂ ಸಂಘಟನೆಗಳು ಸ್ಥಳೀಯ ಹಿಂದೂಗಳಲ್ಲಿ ಭಾವನೆಗಳನ್ನು ಕೆರಳಿಸಿ ಜನಾಂಗೀಯ ದ್ವೇಷವನ್ನು ಬಿತ್ತುವುದು ಇದರ ಉದ್ದೇಶವಾಗಿತ್ತು ಎಂಬುದು ಬಹಿರಂಗ ರಹಸ್ಯ. ಅವತ್ತಿನ ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರ ಈ ಜನಾಂಗ ದ್ವೇಷದ ದಾಳಿಗಳನ್ನು ಅನುಮೋದಿಸುವಂತೆ ಮೌನ ವಹಿಸಿತ್ತು. ಮಾನವ ಹಕ್ಕುಗಳಿಗಾಗಿ ಕ್ರೈಸ್ತರ ವೇದಿಕೆ (United chistians forum for human Rights UCFHR) ಹಿಂದೂ ಸಂಘಟನೆಗಳ ದಾಳಿ, ದೌರ್ಜನ್ಯವನ್ನು ಖಂಡಿಸಿ ಇಡೀ ದೇಶಾದ್ಯಂತ ಪ್ರತಿಭಟನೆ ನಡೆಸಿತು. ಆದರೆ ಇದಾವುದನ್ನು ಅವತ್ತಿನ ಬಿಜೆಪಿ ನೇತೃತ್ವದ ಸರ್ಕಾರ ಗಣನೆಗೆ ತೆಗೆದುಕೊಳ್ಳಲಿಲ್ಲ. 

1998ರ ಅವಧಿಯಲ್ಲಿದ್ದ ದಿನಗಳೇ ಈಗ ಮತ್ತೆ ಮರು ಕಳುಹಿಸುತ್ತಿವೆ.  ಭ್ರಮೆ ಮತ್ತು ಸುಳ್ಳುಗಳಿಂದ ಕೂಡಿದ ರಾಷ್ಟ್ರೀಯತೆ ಮತ್ತು ರಾಷ್ಟ್ರೀಯವಾದ ಶಬ್ದಕ್ಕಿಂತಲೂ ವೇಗವಾಗಿ ಹರಡುತ್ತಾ ಸಾಗಿದೆ. ಭಾರತದಲ್ಲಿ ಅಲ್ಪಸಂಖ್ಯಾತರ ಬದುಕನ್ನು ಬರ್ಬರಗೊಳಿಸುವ ಭಯವನ್ನು ಸೃಷ್ಟಿಸಲಾಗುತ್ತಿದೆ. (ಇದಕ್ಕೆ ಕ್ರೈಸ್ತರು ಹೊರತಾಗಿಲ್ಲ). ಒಂದು ಕಾಶ್ಮೀರ ಫೈಲ್ಸ್’ ಎಂಬ ಸಿನಿಮಾವನ್ನು ಪ್ರಾಯೋಜಿಸಿದ ಸರ್ಕಾರವೇ ಒಂದು ಜನಾಂಗದ ವಿರುದ್ಧ ದ್ವೇಷವನ್ನು  ಉಗ್ರಗೊಳಿಸುವ ರಾಜಕಾರಣ ಸಿನಿಮಾವನ್ನು ಸಿನಿಮಾವನ್ನಾಗಿಯೇ ನೋಡಲಾಗದಷ್ಟು ಚಿಂತನಾಶೀಲತೆಯನ್ನೆ ಕೊಂದು ಹಾಕಿ ಬಿಡುತ್ತದೆ ಎಂದಾದರೆ ಎಲ್ಲಾ ಜನಜಾತಿ ಸಮುದಾಯಗಳಿಗೆ ಹಿತ ಕಾಯುವ ಭರವಸೆಯಾದರೂ ಉಳಿವುದಾದರೂ ಹೇಗೆ?.  ಸಿನಿಮಾವನ್ನು ದ್ವೇಷಕ್ಕಾಗಿಯೇ ನಿರ್ಮಿಸಬಹುದು, ಮನುಷ್ಯರ ಸಾವನ್ನೂ ಬಂಡವಾಳ ಮಾಡಿಕೊಂಡು ಅಧಿಕಾರ ಹಿಡಿಯಬಹುದಾದರೆ ಸಿನಿಮಾ ಮಾಡಿ ದುಡ್ಡು ಬಾಚಬಾರದೇಕೆ? ಎಂಬ ಸೂತ್ರಗಳನ್ನು ನಿರೂಪಿಸಿಬಿಟ್ಟವು. ಗೋಳ್ವಾಲ್ಕರ್ ನ ಹಿಂದುತ್ವದ ವಿಸ್ತರಣೆಯ ಕ್ಷುದ್ರ ಸೂತ್ರದ ಆಧಾರದಲ್ಲೇ ರಾಜಕೀಯ ಪ್ರವರ್ಧಮಾನಕ್ಕೆ ಬಂದ ಬಿಜೆಪಿಯ ಮೂಲಕ ಆರೆಸ್ಸೆಸ್ ತನ್ನ ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಿದೆ. ಅದು ತನ್ನ ಚಿಂತನೆಗಳ ವಿರೂಪಗಳಿಂದ ದೇಶದ ಸೌಹಾರ್ದಪರಂಪರೆಯ ಗರ್ಭವನ್ನೆ ಬಗೆದು ಭ್ರೂಣವನ್ನು ತ್ರಿಶೂಲಕ್ಕೆ ಸಿಕ್ಕಿಸಿಕೊಂಡು ಕೇಕೆ ಹಾಕುವಂತಿದೆ ಭಾಸವಾಗುತ್ತಿದೆ.

ಗುಜರಾತ್ ನಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆದ ನರಮೇಧ ಒಂದು ಯಶಸ್ವಿಯ ಪ್ರಯೋಗದ ಮಾದರಿಯಂತೆ ಎಲ್ಲಾ ಕಾಲಕ್ಕೂ ಹಿಂದುತ್ವವಾದಿಗಳು ಅಮಾನುಷವಾಗಿ ಸಂಭ್ರಮಿಸಬಲ್ಲರು. ಗೋದ್ರಾ ಗಲಭೆಗೂ ಮುಂಚೆ ಕ್ರೈಸ್ತರ ಮೇಲೆ ನಡೆದ ಅತ್ಯಾಚಾರ, ಹತ್ಯೆ, ಚರ್ಚ್ ಗಳ ಮೇಲಿನ ದಾಳಿಗಳನ್ನು ಅವತ್ತಿನ ಗುಜರಾತ್ ಡಿಜಿಪಿ ಆಗಿದ್ದ ಸಿ.ಪಿ. ಸಿಂಗ್ ದೃಢೀಕರಿಸಿದ್ದರು. ನಂತರ ನಡೆದಿದ್ದು ಮುಸ್ಲಿಮರ ಮಾರಣ ಹೋಮ. ಇದರ ಫಲವಾಗಿಯೇ ಭಯಸೃಷ್ಟಿಯಿಂದ ಅಧಿಕಾರದಲ್ಲಿ ಮುಂದುವರೆಯತ್ತಿರುವ ಬಿಜೆಪಿ ನಂತರ ನಡೆಸಿದ್ದ ದಲಿತರ ಮೇಲಿನ ಹಲ್ಲೆ, ಅತ್ಯಾಚಾರ, ಹತ್ಯೆಗಳು ಎಲ್ಲವೂ ಸಿನಿಮಾವಾಗದ, ಕನಿಷ್ಠ ಬಿಡಿ ಬಿಡಿ ಕತೆಗಳಲ್ಲೂ ಕಾಣಸಿಗದ ಅಸಲಿ ಫೈಲ್ ಗಳೇ ಆಗಿವೆ. ಈ ದೇಶದಲ್ಲಿ ಮೇಲ್ಜಾತಿಗಳ ಸಾವು ಮಾತ್ರವೇ ಘನಗೊಳ್ಳುತ್ತದೆ. ದಲಿತರು, ಅಲ್ಪಸಂಖ್ಯಾತರ ಸಾವು, ಕಷ್ಟ -ನಷ್ಟಗಳು ಎಂದಿಗೂ ಜೀವಮೌಲ್ಯವೆನಿಸುವುದಿಲ್ಲ.  ಇತಿಹಾಸದ ಪುಟಗಳಿಂದ ಪಾಠ ಕಲಿತು ವರ್ತಮಾನದ ಬದುಕನ್ನು ಸಹ್ಯವಾಗಿಸಿಕೊಳ್ಳುವ ಮತ್ತು ಭವಿಷ್ಯದಲ್ಲಿ ಹೊಸಪೀಳಿಗೆಯಲ್ಲಿ ಪ್ರೀತಿ-ಮೈತ್ರಿ-ಕರುಣೆಯ ಮನೋಧರ್ಮವನ್ನು ತುಂಬಬೇಕಾದ್ದನ್ನು ಕಲಿಸಲಾಗದು ಯಾವ ನಾಗರೀಕತೆಯೂ ಅಂತಿಮವಾಗಿ ಮಣ್ಣಾಗಿ ಬಿಡುತ್ತದೆ. ಆದರೆ ದೇಶದಲ್ಲಿ ಇಂದು ಇದಕ್ಕೆ ವ್ಯತಿರಿಕ್ತ ಬೆಳವಣಿಗಳು ನಡೆಯುತ್ತಿವೆ.  ಇತಿಹಾಸದ ಅವಘಡಗಳಿಗೆ ವರ್ತಮಾನದ ಪೀಳಿಗೆಯ  ತಲೆಗಳ ಬಲಿ ಕೇಳುವ ಕ್ರೌರ್ಯವನ್ನೆ ಮೌಲ್ಯವೆಂದು ನಂಬಿಸಲಾಗುತ್ತಿದೆ. ಮತ್ತು ಅದರಂತೆ ಕಾರ್ಯಯೋಜನೆಯ  ಸೇಡನ್ನು ಬಿತ್ತಲಾಗುತ್ತಿದೆ. 

ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಹಿಂದೂ ಸಂಘಟನೆಗಳು ದಾಳಿ, ಹಿಂಸೆಗಿಳಿದಿದ್ದರೆ ಸರ್ಕಾರಗಳು ಅವುಗಳನ್ನು ಸಮರ್ಥಿಸಿಕೊಳ್ಳುವಂತೆ ವರ್ತಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ದೇಶದ ಆರ್ಥಿಕತೆ, ನಿರುದ್ಯೋಗ, ಶಿಕ್ಷಣ, ಆರೋಗ್ಯದಂತಹ ಮೂಲಭೂತ ಸಂಗತಿಗಳು ಆಡಳಿತರೂಢ ಬಿಜೆಪಿಗೆ ಯಾವತ್ತಿಗೂ ಮುಖ್ಯವೆನಿಸುತ್ತಿಲ್ಲ. ಮುಖ್ಯ ಎನಿಸಲಾರದೂ ಕೂಡ.  ಪೆಟ್ರೋಲ್, ಡೀಸಲ್ ದರ, ದಿನನಿತ್ಯದ ಬಳಕೆಯ ವಸ್ತುಗಳ ದರ ಏರಿಕೆಯ ಹೊರೆ ಎಲ್ಲವೂ ದೇಶಕ್ಕಾಗಿಯೇ ಎಂದು ನಂಬಿಸಲಾಗುತ್ತಿದೆ. ಎಂಟು ವರ್ಷಗಳ ಆಡಳಿತ ನಡೆಸಿದ ಈ ದೇಶದ ಪ್ರಧಾನಿ ಮೋದಿ ಮತ್ತು ಅವರ ಪಕ್ಷ ಈ ದೇಶದ ಜನರ ಶಿಕ್ಷಣ, ಆರೋಗ್ಯ, ಉದ್ಯೋಗ, ಅನ್ನ, ಮಕ್ಕಳ ಅಪೌಷ್ಟಿಕತೆಗೆ ರೂಪುಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಂದಿಗಾದರೂ ಮಾತನಾಡಿದ್ದಿದೆಯಾ?      ಅವರು ಹಿಂದೆಯೂ, ಈಗಲೂ ಮಾತನಾಡುತ್ತಿರುವುದು ವೈದಿಕ ಪ್ರೇಣಿತ ಧರ್ಮ, ಅಧಿಕಾರ ರಾಜಕಾರಣದ ಸುಳ್ಳುಗಳ ಒಳಗೊಂಡ ಹುಸಿ ರಾಷ್ಟ್ರೀಯತೆ ಬಗ್ಗೆ ಮಾತ್ರ.  ದೇಶಪ್ರೇಮ, ರಾಷ್ಟ್ರೀಯತೆ ಎಲ್ಲವೂ ಇದೀಗ ಅಪವ್ಯಾಖ್ಯಾನಗೊಂಡು ಈ ದೇಶದ ಜನರ ಮೆದುಳಿಗೆ ಹಿಂದುತ್ವದ ಸನ್ನಿಯ ಸೋಂಕನ್ನು ಸಿಂಪಡಿಸಿ ಅಮಲಿನಲ್ಲಿಡಲಾಗಿದೆ.   ಹಿಂದೂ ಶ್ರೇಷ್ಠತೆಯ ವ್ಯಸನ ಮತ್ತು ಮುಸ್ಲಿಮ್ ವಿರೋಧಿ ಜನಾಂಗ ದ್ವೇಷ ಭಾರತವನ್ನು ಮತ್ತೊಂದು ಹಿಟ್ಲರ್ ಕಾಲದ ಜರ್ಮನಿಯಾಗಿಸುವತ್ತ ರೂಪುಗೊಳ್ಳುತ್ತಿರುವ ಈ ಹೊತ್ತಿನ ಬಹುದೊಡ್ಡ ಆತಂಕ ಮತ್ತು ಇದನ್ನು ಎದುರಿಸುವ ಬಗೆಗಿರುವ ಸವಾಲೇ ಆಗಿದೆ. 

ಕಳೆದ ಎಂಟು ವರ್ಷಗಳಲ್ಲಿ ಮುಸ್ಲಿಮ್ ವಿರೋಧಿ ಭಾವನೆ ಏರಿಕೆಯಾಗುತ್ತಿದೆ. ಎನ್ಆರ್ ಸಿ/ಸಿಎಎ, ತ್ರಿವಳಿ ತಲಾಖ್, ತಬ್ಲಿಗಿ, ಹಿಜಾಬ್ ನಂತಹ ಸಂಗತಿಗಳನ್ನು ಮುಂದಿಟ್ಟುಕೊಂಡು ಈ ದೇಶದ ಮುಸ್ಲಿಮರನ್ನು ಪರಕೀಯರಂತೆ ಬಿಂಬಿಸುತ್ತಿರುವುದು, ಸಂವಿಧಾನಿಕ ಹಕ್ಕುಗಳ  ನಿರಾಕರಣೆ ಎಲ್ಲವೂ ಹಿಂದೂ ಸಂಘಟನೆಗಳ ಇಶಾರೆ ಮೇರೆಗೆ ಭಾರತವನ್ನು ಹಿಮ್ಮುಖ ಚಲನೆಗೆ  ದೂಡಲ್ಪಡುತ್ತಿದೆ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಹಿಜಾಬ್ ಹೆಸರಿನಲ್ಲಿ, ಪಠ್ಯ ಪುಸ್ತಕಗಳಲ್ಲಿನ ವಿಚಾರಗಳ ಬಗ್ಗೆ ವಿದ್ಯೆ-ಜ್ಞಾನದ ಕೇಂದ್ರಗಳಾದ ಶಾಲಾ-ಕಾಲೇಜುಗಳಲ್ಲಿನ ಮಕ್ಕಳ ಮನಸ್ಸಿನಲ್ಲಿ ಧರ್ಮದ್ವೇಷದ ಕಿಡಿ ಹಚ್ಚಿದ ಕೋಮುವಾದಿಗಳು ಹಾಲಿನಂತಿದ್ದ ಹೃದಯಗಳಿಗೆ ಹಾಲಾಹಲವನ್ನೆ ಸುರಿದವರು ಮುಂದುವರೆದು ಜಾತ್ರೆ-ಪರಿಷೆಗಳಲ್ಲಿ ಹಿಂದುತ್ವದ ಹೆಸರಿನಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶವನ್ನು ವಿರೋಧಿಸುವ ಮೂಲಕ ಅನಾದಿಕಾಲದಿಂದಲೂ ಬಂದ ಮನುಷ್ಯ ಸಂಬಂಧಗಳ ಸಹಜ ನೆಲೆಯಲ್ಲಿ ಪರಸ್ಪರ ಒಳಗೊಳ್ಳುವಿಕೆಯ ಧರ್ಮಾತೀತ ಮೈತ್ರಿಗೆ ವಿಷವುಣಿಸುತ್ತಿರುವ ಕಾಲವನ್ನು ಎದುರುಗೊಳ್ಳಬೇಕಾಗಿರುವುದು ಘೋರ ದುರಂತ.   ವಿ.ಡಿ. ಸಾವರ್ಕರ್, ಗೋಳ್ವಾಲ್ಕರ್ ಅವರ ವೈದಿಕ ಪ್ರೇಣಿತ ಹಿಂದುತ್ವವನ್ನು ವಿಸ್ತರಿಸುವ ಅಜೆಂಡಾವನ್ನು ಬಹುಜನರ ಸಾಂಸ್ಕೃತಿಕ ಮೇಳಗಳಿಗೂ ವಿಸ್ತರಿಸಿ ಸಾಮರಸ್ಯದ ಜೀವನವನ್ನು ವಿಷಗೊಳಿಸುವ ದಾರಿಯನ್ನು ಅಗೆಯುತ್ತಿವೆ. ಕೊಲ್ಲೂರಿನಲ್ಲಿ ಮೂಕಾಂಬಿಕ ದೇವಿಗೆ ಟಿಪ್ಪು ಸುಲ್ತಾನ್ ಅವರ ನೆನಪಿಗಾಗಿ ನಡೆಸುವ ಸಲಾಂ ಆರತಿ’ ಯನ್ನು ರದ್ದುಗೊಳಿಸುವುದೇ ಆದರೆ ಶೃಂಗೇರಿ ಶಾರಾದಾಂಭೆಯ ದೇಗುಲ ರಕ್ಷಿಸಿದ ಟಿಪ್ಪು ಸುಲ್ತಾಮ್ ಭಕ್ತಿಯಿಂದ ಕೊಟ್ಟ ಬಳುವಳಿಗಳನ್ನು ಹಿಂದೂ ಧರ್ಮಾಂಧರಿಗೆ ಅರಿವಿಲ್ಲವೆ? ಇದನ್ನು ಕ್ಷುಲ್ಲಕ ರಾಜಕಾರಣವೆನ್ನಲು ಇದಕ್ಕಿಂತ ಸಾಕ್ಷಿ ಏನು ಬೇಕು.

 ಜಾತ್ರೆ-ಉತ್ಸವಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ಕೊಡದೆ ಅಡ್ಡಿಪಡಿಸುವ ಹಿಂದೂ ಸಂಘಟನೆಗಳ ವರ್ತನೆ ರಾಜ್ಯ ಸರ್ಕಾರಕ್ಕೆ ಸಂವಿಧಾನಬಾಹಿರ, ಕಾನೂನು ಬಾಹಿರ, ಸಾಮರಸ್ಯ ಕದಡುವ ಕುಕೃತ್ಯ ಎಂದು ಅನಿಸಲೇ ಇಲ್ಲ. ಬದಲಾಗಿ ಸರ್ಕಾರ ತಾನೆ ಮುಂದೆ ನಿಂತು ಹಿಂದೂ ಧಾರ್ಮಿಕ ದೇವಸ್ಥಾನಗಳ ಆವರಣದಲ್ಲಿ ಹಿಂದೂಯೇತರರಿಗ ಬಳಕೆಗೆ ಅವಕಾಶವಿಲ್ಲ ಎಂಬ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳು 2002ರ ನಿಯಮ ವನ್ನು ಮುಂದಿಟ್ಟುಕೊಂಡು ಹಿಂದೂ ಸಂಘಟನೆಗಳ ಪುಂಡಾಟಿಕೆಯನ್ನು ಸಮರ್ಥಿಸಿಕೊಳ್ಳುತ್ತಿದೆ. ಸಂವಿಧಾನದ ಧರ್ಮನಿರಪೇಕ್ಷ ಭಾರತವನ್ನು, ಜನರ ನಂಬಿಕೆ ಮತ್ತು ಧರ್ಮ ಉಪಾಸನೆಯನ್ನು, ಭ್ರಾತೃತ್ವ ಭಾವನೆಯನ್ನು ಎತ್ತಿ ಹಿಡಿಯಬೇಕಾದ ಸರ್ಕಾರಗಳೇ ಕೋಮುವಾದಿಗಳಿಗೆ, ಧರ್ಮಾಂಧರಿಗೆ ಬೆಂಬಲವಾಗಿ ನಿಂತರೆ ಬೇಲಿಯೇ ಎದ್ದು ಹೊಲವ ಮೇಯ್ದಂತಲ್ಲವೆ?, ಸಂವಿಧಾನದ ಉಳಿವಾದರೂ ಹೇಗೆ? ಸಂವಿಧಾನ ಎಷ್ಟೇ ಉತ್ತಮವಾಗಿರಲಿ, ಅದನ್ನು ನಿರ್ವಹಿಸುವವರು ಕೆಟ್ಟವರಾಗಿದ್ದರೆ ಅದೂ ಕೂಡ ಕೆಟ್ಟದಾಗಿ ಬಿಡುತ್ತದೆ  ಎಂಬುದನ್ನು ಅಂಬೇಡ್ಕರ್ ಸಂವಿಧಾನ ರಚನೆಯ ಸಂದರ್ಭದಲ್ಲೆ ಗ್ರಹಿಸಿ ಎಚ್ಚರಿಸಿದ್ದರೂ.  ಸದ್ಯ ಸಂವಿಧಾನ ನಿರ್ವಹಿಸುವವರು ಕೆಟ್ಟವರಾಗಿರುವುದನ್ನು ದೇಶ ಕಾಣುತ್ತಿದೆ. ಅವರಿಗೆಲ್ಲ ಧರ್ಮದ ಅಫೀಮು ಕುಡಿಸಲಾಗಿದೆ. ಜನರ ಈ ಅಮಲಿನಿಂದ ಹೊರಬರದೆ ಸಂವಿಧಾನ ಉಳಿಯುವುದಿಲ್ಲ. ಸಂವಿಧಾನ ಉಳಿಯದೆ ಭಾರತವನ್ನು ಉಳಿಸಿಕೊಳ್ಳಲಾಗುವುದಿಲ್ಲ.

ಈಗ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಇದರಿಂದ ಪಾರಾಗಲು ಬಿಜೆಪಿಗಿರುವ ದಾರಿಯೆಂದರೆ ಅದು ಕೋಮುವೈಷಮ್ಯದ ಕಿಡಿ ಹಚ್ಚಬೇಕಿದೆ. ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಎಷ್ಟು ಬಾರಿ ಬೇಕಾದರೂ ಭೇಟಿ ನೀಡಬಹುದು. ತಮ್ಮ ಸುಳ್ಳು ಭಾಷಣಗಳಿಂದ ಜನರಲ್ಲಿ ಮುಸ್ಲಿಮ್ ವಿರೋಧಿ ದ್ವೇಷವನ್ನು ಹರಿಸಬಹುದು. ಹಿಂದೂ ಮತಗಳ ಕ್ರೂಢೀಕರಣಕ್ಕೆ ಈ ಜೋಡಿ ಯಾವ ಹಂತಕ್ಕಾದರೂ ಹೋಗುವುದನ್ನು ಈ ದೇಶ ಎರಡು ದಶಕಗಳ ಹಿಂದೆಯೇ ನೋಡಿದೆ. ಜಾತ್ರೆ-ಉತ್ಸವಗಳು ಈಗ ನಕಲಿ ಹಿಂದೂತ್ವದ ಕೇಡಿನ ಅಖಾಡಗಳಾಗಿ ಪರಿವರ್ತನೆಗೊಳ್ಳುತ್ತಿರುವುದು ಕೇಡಿನ ಪರಮಾವಧಿ.             

ಶಕ್ತಿ ಹೀನ ವಿಪಕ್ಷಗಳು

ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಕೋಮುವಾಧಿ ರಾಜಕಾರಣವನ್ನು ಎದುರಿಸಲು ಪ್ರತಿ ರಾಜಕಾರಣವನ್ನು  ಕಟ್ಟುವಲ್ಲಿ ಬಲಿಷ್ಠ ಪಕ್ಷಗಳೇ ವಿಫಲವಾಗಿರುವಂತೆ  ಕರ್ನಾಟಕದಲ್ಲೂ  ಬಿಜೆಪಿಯ ಮತೀಯವಾದಿ ರಾಜಕಾರಣವನ್ನು ಹಿಮ್ಮೆಟ್ಟುಸುವಲ್ಲಿ ಕಾಂಗ್ರೆಸ್, ಜೆಡಿಎಸ್ ಸೋತಿವೆ. ಕಾಂಗ್ರೆಸ್ ನ ಒಳಗಿರುವ ನಾಯಕತ್ವದ ಕಚ್ಚಾಟ, ಸಂಘಟನಾ ವೈಫಲ್ಯ  ಮತ್ತು ಜೆಡಿಎಸ್ ನ ಅವಕಾಶವಾದಿ ರಾಜಕಾರಣ ಹಾಗೂ ಸೈದ್ಧಾಂತಿಕ ದಿವಾಳಿತನ ಬಿಜೆಪಿಯ ಕೋಮುವಾದಿ ರಾಜಕಾರಣಕ್ಕೆ ವರದಾನವಾಗಿದೆ. ರಾಜ್ಯದಲ್ಲಿ ಬಿಜೆಪಿಗೆ ರಾಜಕೀಯ ಶಕ್ತಿಯನ್ನು ತುಂಬಿದ (ಅಪ)ಕೀರ್ತಿ ಎಸ್. ಬಂಗಾರಪ್ಪ ಮತ್ತು ಎಚ್. ಡಿ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ. ರಾಜ್ಯದ ಜನತೆ ಕೋಮುವಾದಿ ಬಿಜೆಪಿಯನ್ನು ನಿರಾಕರಿಸುತ್ತಲೇ ಬಂದಿರುವಾಗ ಬಂಗಾರಪ್ಪ ಎಂಬ ಜನನಾಯಕ ಬಿಜೆಪಿ ಸೇರುವುದರೊಂದಿಗೆ ಬಿಜೆಪಿಯನ್ನು ಮಡಿವಂತ ಪಕ್ಷ ಎಂಬ ಅಪವಾದಕ್ಕೆ ತೆರೆ ಎಳೆದರು. ಅಂತಿಮವಾಗಿ ಅಲ್ಲಿರಲಾರದೆ ಹೊರಬಂದರೂ ಅವರೊಂದಿಗೆ ಬಿಜೆಪಿಗೆ ಹೋದ ಮತಗಳು ಮಾತ್ರ ಅಲ್ಲೇ ಉಳಿದುಕೊಂಡು ಬಿಟ್ಟವು. ನಂತರದ ಸರದಿ ಎಚ್.ಡಿ ಕುಮಾರಸ್ವಾಮಿ ಅವರದ್ದು, ಕಾಂಗ್ರೆಸ್ ಜೊತೆ ಮುರಿದುಕೊಂಡು ಸಿದ್ಧಾಂತ ಭ್ರಷ್ಟರಾಗಿ ಬಿಜೆಪಿ ಜೊತೆ ಅಧಿಕಾರ ಹಂಚಿಕೊಂಡ ಕುಮಾರಸ್ವಾಮಿ ತಮ್ಮ ವಚನ ಭ್ರಷ್ಟತೆಯಿಂದ ಬಿಜೆಪಿಯನ್ನು ಅಧಿಕಾರದ ಸನಿಹಕ್ಕೆ ತಂದು ಬಿಟ್ಟರು.

ಯಡಿಯೂರಪ್ಪ ಅವರ ಸಂಘಟನಾ ಬಲದಿಂದಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೂ ಯಡಿಯೂರಪ್ಪ ಅವರನ್ನು ನೈಪಥ್ಯಕ್ಕೆ ಸರಿಸುತ್ತಿರುವ ಬಿಜೆಪಿ   2023ರ ಚುನಾವಣೆಯನ್ನು ಬಿಜೆಪಿ ಉಗ್ರ ಹಿಂದೂತ್ವದ ಹೆಸರಿನಲ್ಲಿ ಗೆಲ್ಲಲು ತಂತ್ರ ಹೊಸೆದಿದೆ. ಮುಸ್ಲಿಮರ ವಿರುದ್ಧ ಶೂದ್ರರು, ದಲಿತರನ್ನು ಎತ್ತಿ ಕಟ್ಟುವುದು ಆ ಮೂಲಕ ಗಲಭೆಯ ಉರಿಯಲ್ಲಿ ಅಧಿಕಾರದ ಬೆಳಕ ಪಡೆಯುವುದು ಒಳಮರ್ಮ. ಅಲ್ಪಸಂಖ್ಯಾತರ ವಿರುದ್ಧ ಬಿಜೆಪಿ ಅದರ ಅಂಗ ಸಂಘಟನೆಗಳಾದ ವಿಎಚ್ಪಿ, ಬಜರಂಗದಳಗಳು ನಡೆಸುತ್ತಿರುವ ಜನಾಂಗ ದ್ವೇಷವನ್ನು ದಿಟ್ಟವಾಗಿ ಎದುರಿಸಲಾರದಷ್ಟು ವಿಪಕ್ಷಗಳು ಶಕ್ತಿ ಹೀನವಾಗಿವೆ. ಮುಸ್ಲಿಮ್ ಓಲೈಕೆ ರಾಜಕಾರಣದ ಹಣೆಪಟ್ಟಿಗೆ ಗುರಿಯಾಗಿ ಹಿಂದೂ ಮತಗಳನ್ನು ಕಳೆದುಕೊಳ್ಳುವ ಭೀತಿಗೊಳಗಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮುಸ್ಲಿಮ್ ಸಮುದಾಯದ ಪರ ನಿಲ್ಲಲು ಹಿಂದೇಟು ಹಾಕುತಿದೆ.

Join Whatsapp