ಉಡುಪಿ: ಬಸ್‌ನಲ್ಲಿ ಕಳೆದುಕೊಂಡ ಲಕ್ಷಾಂತರ ರೂ.ಬೆಲೆಬಾಳುವ ವಜ್ರದ ಕರಿಮಣಿ ಸರವನ್ನು ‘ಇದರ ಮಾಲೀನ ತಾನಲ್ಲ’ ಎಂದು ಅದರ ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಬಸ್ ಚಾಲಕ ಹಾಗೂ ನಿರ್ವಾಹಕರು ಪ್ರಾಮಾಣಿಕತೆ ಮೆರೆದಿದ್ದಾರೆ.
ಗುರುವಾರ ಮಣಿಪಾಲದಿಂದ ಮಂಗಳೂರಿಗೆ ಬೆಳಗ್ಗೆ ಮೊದಲ ಟ್ರಿಪ್ ಹೋಗುತ್ತಿದ್ದ ರೇಷ್ಮಾ ಹೆಸರಿನ ಖಾಸಗಿ ಬಸ್‌ನಲ್ಲಿ ತೆರಳುತ್ತಿದ್ದ ಮಣಿಪಾಲ ಮೂಲದ ದಂಪತಿ ಮಂಗಳೂರಿಗೆ ತಲುಪಿದಾಗ ಕರಿಮಣಿ ನಾಪತ್ತೆಯಾಗಿರುವುದು ತಿಳಿದುಬಂದಿದೆ. ಕೂಡಲೇ ಅವರು ಟಿಕೆಟ್‌ನಲ್ಲಿದ್ದ ರೇಷ್ಮಾ ಬಸ್‌ನ ಸಂಖ್ಯೆಗೆ ಕರೆಮಾಡಿ ವಿಚಾರ ತಿಳಿಸಿದ್ದಾರೆ.
ಇತ್ತ ಸಿಕ್ಕಿದ ಕರಿಮಣಿಯನ್ನು ಯಾರೋ ಮರೆತು ಬಸ್‌ನಲ್ಲಿ ಬಿಟ್ಟುಹೋಗಿದ್ದಾರೆ ಎಂದು ತಿಳಿದ ಬಸ್ ಸಿಬಂದಿ ಅದನ್ನು ಜೋಪಾನವಾಗಿ ತೆಗೆದಿರಿಸಿದ್ದಾರೆ. ಕರಿಮಣಿ ಮಾಲೀಕರು ಕರೆಮಾಡಿದಾಗ ಸೂಕ್ತ ದಾಖಲೆ ನೀಡಿದರೆ ವಾಪಸು ನೀಡುವುದಾಗಿ ತಿಳಿಸಿ ಮಣಿಪಾಲಕ್ಕೆ ಬರುವಂತೆ ಸೂಚಿಸಿದ್ದಾರೆ.
ಅದರಂತೆ ಮಂಗಳೂರಿನಿಂದ ಮಣಿಪಾಲಕ್ಕೆ ಆಗಮಿಸಿದ ಕರಿಮಣಿ ಮಾಲೀಕರಿಗೆ ಬಸ್ ಚಾಲಕ ಪುರಂದರ, ನಿರ್ವಾಹಕ ಆಸಿಫ್ ಅವರು ಬಸ್‌ನಲ್ಲಿ ದೊರೆತ ನಾಲ್ಕೂವರೆ ಲಕ್ಷ.ರೂ. ಬೆಲೆ ಬಾಳುವ ವಜ್ರದ ಕರಿಮಣಿಸರವನ್ನು ಹಿಂದಿರುಗಿಸಿದ್ದಾರೆ. ಬಸ್ ಸಿಬ್ಬಂದಿಯ ಪ್ರಾಮಾಣಿಕತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿವೆ.