ಜೈಪುರ: ಪ್ರಯಾಣದ ವೇಳೆ ಹೆಚ್ಚುವರಿ ₹10 ಟಿಕೆಟ್ ಹಣ ಕೇಳಿದ್ದನ್ನು ಪ್ರಶ್ನಿಸಿದ ನಿವೃತ್ತ ಐಎಎಸ್ ಅಧಿಕಾರಿ ಒಬ್ಬರ ಮೇಲೆ ಬಸ್ ಕಂಡಕ್ಟರ್ ಹಲ್ಲೆ ಮಾಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಗಮನ ಸೆಳೆದಿದೆ.
ರಾಜಸ್ಥಾನದ ನಿವೃತ್ತ ಐಎಎಸ್ ಅಧಿಕಾರಿ ಆರ್.ಎಲ್. ಮೀನಾ (75) ಎನ್ನುವರು ಜೈಪುರ ನಗರ ಸಾರಿಗೆ ಬಸ್ನಲ್ಲಿ ಆಗ್ರಾ ರಸ್ತೆಯ ಮಾರ್ಗವಾಗಿ ಕನೋಟಾ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ವೇಳೆ ಕನೋಟಾ ನಿಲ್ದಾಣ ಸಮೀಪಿಸಿದ್ದನ್ನು ಕಂಡಕ್ಟರ್ ಪ್ರಯಾಣಿಕರ ಗಮನಕ್ಕೆ ತಂದಿರಲಿಲ್ಲ. ಇದರಿಂದ, ಮೀನಾ ಅವರಿಗೆ, ಮುಂದಿನ ನೈಲಾ ಎಂಬಲ್ಲಿನ ನಿಲ್ದಾಣಕ್ಕೆ ಇಳಿದುಕೊಳ್ಳುವಂತೆ ಹಾಗೂ ಹೆಚ್ಚುವರಿ ₹10 ಟಿಕೆಟ್ ಹಣ ನೀಡುವಂತೆ ಕಂಡಕ್ಟರ್ ಒತ್ತಾಯಿಸಿದ್ದಾನೆ.
ಇದರಿಂದ ಕುಪಿತಗೊಂಡ ಮೀನಾ ಅವರು ಆತನ ಜೊತೆ ಜಗಳಕ್ಕೆ ಮುಂದಾಗಿದ್ದಾರೆ. ತಕ್ಷಣವೇ ಕಂಡಕ್ಟರ್ ಮೀನಾ ಅವರ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದಾನೆ.
ಈ ಕುರಿತು ಆರ್.ಎಲ್. ಮೀನಾ ಅವರು ನೀಡಿರುವ ದೂರು ದಾಖಲಿಸಿಕೊಂಡಿರುವ ಪೊಲೀಸರು ಹಲ್ಲೆ ಮಾಡಿದ ಕಂಡಕ್ಟರ್ನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.